


ಬಂಟ್ವಾಳ: ತಲಪಾಡಿಯಲ್ಲಿ ಮನೆ ಕೆಲಸದ ಯುವತಿಯೋರ್ವಳಿಗೆ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬಿಸಿರೋಡಿನ ಕೈಕಂಬ ಸಮೀಪದ ಬಿ.ಮೂಡ ಗ್ರಾಮದ ತಲಪಾಡಿ ಮೊಹಪ್ಪತ್ ಲಾಲ್ ನಿವಾಸಿ ಹಮೀದ್ ಎಂಬಾತ ಅತ್ಯಾಚಾರ ಮಾಡಿದ ಆರೋಪಿ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಾಚಾರದಿಂದ ಮನಸ್ಸಿಗೆ ಅಘಾತವಾಗಿರುವ ಯುವತಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅತ್ಯಾಚಾರ ಆರೋಪಿ ಪರಾರಿಯಾಗಿದ್ದು, ಪೋಲೀಸರು ಈತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಹಮೀದ್ ಎಂಬಾತ ಯುವತಿಗೆ ಹಲ್ಲೆ ನಡೆಸಿ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಜೊತೆಗೆ ಈ ಬಗ್ಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ಸಂತ್ರಸ್ತೆ ಯುವತಿಯ ದೂರಿನಂತೆ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಶಿವಮೊಗ್ಗ ಭದ್ರಾವತಿಯ ಹೊಳೆಹೊನ್ನೂರು ನಿವಾಸಿ 19 ವರ್ಷ ವಯಸ್ಸಿನ ಯುವತಿಗೆ ಅಲ್ಲಿನ ಯುವಕನ ಜೊತೆ ಮದುವೆಯಾಗಿತ್ತು. ಕೆಲವು ವೈಯಕ್ತಿಕ ಕಾರಣಗಳಿಂದ ಈಕೆಯ ಗಂಡನ ಜೊತೆಯಲ್ಲಿ ಸಂಸಾರ ನಡೆಯದ ಕಾರಣ ಅವಳು ಗಂಡನನ್ನು ಬಿಟ್ಟು ತಾಯಿ ಮನೆಗೆ ಬಂದಿದ್ದಳು. ತೀರ ಬಡತನದ ಕುಟುಂಬದಲ್ಲಿನ ಯುವತಿಗೆ ಜೀವನ ಸಾಗಿಸುವುದೇ ಕಷ್ಟವಾಗಿದ್ದರಿಂದ ಈಕೆ ತಲಪಾಡಿ ಮೊಹಪ್ಪತ್ ಲಾಲ್ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಗೆ ಕೆಲಸಕ್ಕೆಂದು ಬರುತ್ತಾಳೆ.
ಇಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಅಬ್ದುಲ್ ರಹಮಾನ್ ಅವರ ಹೆಂಡತಿಯ ತಮ್ಮ(ಬಾವ) ಹಮೀದ್ ಮನೆಯಲ್ಲಿ ಯಾರು ಇಲ್ಲದ ವೇಳೆ ಬಂದು ಹೋಗುತ್ತಿದ್ದ, ಆ ವೇಳೆಯಲ್ಲಿ ಕೆಲಸದ ಯುವತಿಗೆ ಬಲಾತ್ಕಾರವಾಗಿ ಒಪ್ಪದೇ ಇರುವ ಕಾರಣಕ್ಕೆ ಹಲ್ಲೆ ನಡೆಸಿ ಹಲವಾರು ಬಾರಿ ಅತ್ಯಾಚಾರ ಮಾಡಿದ್ದಾನೆ, ಪ್ರತಿ ಹಲ್ಲೆ ನಡೆಸಿ ಅತ್ಯಾಚಾರ ಮಾಡುವಾಗಲೂ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪರಾರಿಯಾಗಿರುವ ಈತನ ಪತ್ತೆಗೆ ಬಲೆಬೀಸಿದ್ದಾರೆ.





