



ಬೆಂಗಳೂರು: ನಾಳೆಯಿಂದ ಒಂದು ವಾರಗಳ ಕಾಲ ಕರ್ನಾಟಕ ಲಾಕ್ ಡೌನ್ ಮಾಡುವಂತೆ ಸಿ.ಎಂ.ಯಡಿಯೂರಪ್ಪ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ನಿದ್ದೆಗೆಡಿಸಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ವಾರಗಳ ಕಾಲ ಕರ್ನಾಟಕ ರಾಜ್ಯದ ಸಿನೆಮಾ ಥಿಯೇಟರ್, ಬಾರ್, ಪಬ್, ಎಲ್ಲಾ ಶಾಲಾ ಕಾಲೇಜುಗಳನ್ನು ಲಾಕ್ ಡೌನ್ ಮಾಡುವಂತೆ ಸಿ.ಎಂ. ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರೋಗ್ಯ ಸಚಿವ, ವೈದ್ಯರು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ಸಭೆಯ ಬಳಿಕ ಮಾತನಾಡಿದ ಅವರು, ನಿಗಧಿಯಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ. ಕೊರೊನಾ ತಡೆಯಲು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.
ಕೊರೋನ ಆತಂಕ: ಶನಿವಾರದಿಂದ(ನಾಳೆ) ಒಂದು ವಾರ ಬಾರ್, ರೆಸ್ಟೋರೆಂಟ್, ಥಿಯೇಟರ್, ಮಾಲ್, ವಸ್ತುಪ್ರದರ್ಶನಗಳು ಬಂದ್. ಒಂದು ವಾರ ಇಡೀ ರಾಜ್ಯದ ಶಾಲಾ, ಕಾಲೇಜುಗಳು, ವಿ.ವಿ.ಗಳು ಬಂದ್. ಎಲ್ಲಾ ಮಾದರಿಯ ಕ್ರೀಢೆಗಳಿಗೂ ನಿಷಿದ್ಧ ಮಾಡಲಾಗಿದೆ. ಈಗಾಗಲೇ ಫಿಕ್ಸ್ ಆಗಿರುವ ಮದುವೆ ಸಮಾರಂಭಗಳ ಸರಳ ಆಚರಣೆ ಮಾಡಲು ಸಿ.ಎಂ. ಸೂಚನೆ ನೀಡಲಾಗಿದ್ದು, ವಿದೇಶ ಪ್ರವಾಸಕ್ಕೆ ತೆರಳದಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ 24 ಮಂದಿಗೆ ತಪಾಸಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮತ್ತಷ್ಟು ಕೊರೊನಾ ವೈರಸ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂಬುದಾಗಿ ಹೇಳಿದರು.
ಕಲ್ಬುರ್ಗಿ ಘಟನೆಯ ಬಳಿಕ ಚರ್ಚೆ ನಡೆದು ಈ ನಿರ್ಧಾರಕ್ಕೆ ಬರಲಾಗಿದೆ. ಕ್ರೀಡೆ, ಕಾನ್ಫರೆನ್ಸ್, ಮದುವೆ ವಾರಗಳ ಕಾಲ ರಾಜ್ಯಾದ್ಯಂತ ನಿಲ್ಲಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ರೀತಿಯ ತೀರ್ಮಾನ ಮಾಡಲಾಗಿದೆ. ಸಾರ್ವಜನಿಕರ ಸಹಕಾರ ಬೇಕಾಗಿದೆ.
ಪರಿಸ್ಥಿತಿ ನೋಡಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಕಲ್ಬುರ್ಗಿಯಲ್ಲಿ ಕೊರೊನಾ ವೈರಸ್ ಗೆ ಸಾವನ್ನಪ್ಪಿದ ಬಳಿಕ ಆತನ ಜೊತೆಯಲ್ಲಿರುವ ಎಲ್ಲರ ಬಗ್ಗೆ ಹೆಚ್ಚು ನಿಗಾ ವಹಿಸಲಾಗಿದೆ. ಆತನ ಕುಟುಂಬದ ನಾಲ್ವರನ್ನು ವಿಶೇಷವಾದ ವಾರ್ಡ್ ನಲ್ಲಿ ದಾಖಲಿಸಿ ನೋಡಿಕೊಳ್ಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.





