ವಿಟ್ಲ: ಕಾನೂನು ವಿಚಾರವಾಗಿ ಬ್ಯಾನರ್ ಸಣ್ಣ ವಿಚಾರವಾದರೂ ಭಾವನಾತ್ಮಕವಾಗಿ ದೊಡ್ಡ ವಿಷಯವಾಗಿದೆ. ಸರಕಾರಿ ಜಾಗದಲ್ಲಿ ಹಾಕುವ ಪ್ರತಿ ಬ್ಯಾನರ್ ಗೂ ಕಡ್ಡಾಯವಾಗಿ ಪರವಾನಿಗೆ ತೆಗೆದುಕೊಳ್ಳಬೇಕು. ಬ್ಯಾನರ್ ಗಳಲ್ಲಿ ಕೋಮು ದ್ವೇಷ ಹರಡುವ ವಾಕ್ಯ ಹಾಗೂ ಘನತೆಗೆ ಧಕ್ಕೆ ತರುವ ವಿಚಾರಗಳು ಇರಬಾರದು ಎಂದು ವಿಟ್ಲ ಠಾಣೆಯ ಪೋಲೀಸ್ ಉಪನಿರೀಕ್ಷಕ ವಿನೋದ್ ಎಸ್. ಕೆ. ಹೇಳಿದರು.
ವಿಟ್ಲದಲ್ಲಿ ಮಾ.15ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ವಿಟ್ಲ ಠಾಣೆಯಲ್ಲಿ ಜನಪ್ರತಿನಿಧಿಗಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು ಹಾಗೂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬ್ಯಾನರ್‌ಗಳನ್ನು ಸಿಸಿ ಕ್ಯಾಮರಾದ ಅಡಿಯಲ್ಲಿಯೇ ಹಾಕಬೇಕು ಮತ್ತು ಕೈಗೆಟಕದಷ್ಟು ಎತ್ತರದಲ್ಲಿ ಅಳವಡಿಸಬೇಕು. ಸ್ಥಳೀಯವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಲವಾರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ರಾತ್ರಿ ಅನಗತ್ಯವಾಗಿ ಓಡಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಬಾಲಕೃಷ್ಣ ಸೆರ್ಕಳ ಮಾತನಾಡಿ ವಾರದ ಕಾರ್ಯಕ್ರಮಕ್ಕೆ ಸಿಸಿ ಕ್ಯಾಮರಾವನ್ನು ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಬ್ಯಾನರ್ ಕಾಯುವ ಕಾರ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ನಾವು ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ. ಎಸ್. ಮಹಮ್ಮದ್ ಮಾತನಾಡಿ ಸಹೋದರ ಧರ್ಮವಾದ ಹಿಂದೂ ಧರ್ಮದವರಲ್ಲಿ ಬಹಳಷ್ಟು ಗೌರವವನ್ನು ಇಟ್ಟುಕೊಂಡಿದ್ದೇವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಇಲಾಖೆಗೆ ಇದೆ. ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವ ಕಾರ್ಯ ಯಾರಿಂದಲೂ ನಡೆಯುವುದಿಲ್ಲ ಎಂದರು.
ಹಿಂದೂ ಸಂಘಟನೆಯ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ ಸಂಘಟನೆಗಳ ಕಡೆಯಿಂದ ಪ್ರತಿಯೊಬ್ಬರಿಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಾಗಿದೆ. ತಪ್ಪು ಮಾಡಿದವರನ್ನು ನಿರ್ದಾಕ್ಷಿಣ್ಯವಾಗಿ ಇಲಾಖೆಗೆ ಒಪ್ಪಿಸುವ ಕಾರ್ಯ ನಡೆಯಬೇಕು. ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳ ಮೇಲೆ ಇಲಾಖೆ ನಿಗಾ ಇಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ರಾಮದಾಸ ಶೆಣೈ, ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ಶೆಟ್ಟಿ ಮುಳಿಯಗುತ್ತು, ವಿಎಚ್‌ಪಿ ಮುಖಂಡ ಗೋವರ್ಧನ ವಿಟ್ಲ, ಮಾರಪ್ಪ ಶೆಟ್ಟಿ ಪುಣಚ, ಜೆಡಿಎಸ್ ಮುಖಂಡ ಜಾಫರ್ ವಿಟ್ಲ, ಠಾಣಾ ವ್ಯಾಪ್ತಿಯ ಪಿಡಿಒ ಹಾಗೂ ಗ್ರಾಮಕರಣಿಕರು ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here