






ಬಂಟ್ವಾಳ: ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಉಳ್ಳಾಲ ಮೂಲದ ವ್ಯಕ್ತಿಗೆ ಕೊರೊನೊ ವೈರಸ್ ನೆಗೆಟಿವ್ ಎಂಬ ರಿಪೋರ್ಟ್ ಬಂದಿದ್ದು, ಬಂಟ್ವಾಳ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಎರಡು ದಿನಗಳಿಂದ ಬಾರೀ ಸುದ್ದಿಯಾಗಿದ್ದ ಶಂಕಿತ ಕೊರೊನೊ ವೈರಸ್ ಪ್ರಕರಣದ ಗಂಟಲು ದ್ರವ ಪರೀಕ್ಷೆಯ ಮೆಡಿಕಲ್ ರಿಪೋರ್ಟ್ ವೈದ್ಯರ ಕೈಸೇರಿದ್ದು, ಅದರಲ್ಲಿ ನೆಗೆಟಿವ್ ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ತಿಳಿಸಿದ್ದಾರೆ.
ಕಳೆದ ಆದಿತ್ಯವಾರ ವಿದೇಶದಿಂದ ಈತ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಆತನಲ್ಲಿ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ಈತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಈತ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ವಿಟ್ಲದ ಪತ್ನಿಯ ಮನೆಯಲ್ಲಿ ರಾತ್ರಿ ತಂಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪಡೆದ ಜಿಲ್ಲಾಡಳಿತ ಆತನನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಅವರ ಮುಖೇನ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಆತನ ಗಂಟಲಿನ ದ್ರವವನ್ನು ಬೆಂಗಳೂರು ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಅದರ ಪರೀಕ್ಷೆ ಗೆ 48 ಗಂಟೆಗಳ ಕಾಲ ಅವಕಾಶ ಬೇಕಿದ್ದ ಕಾರಣ ಇಂದು ಪರೀಕ್ಷೆಯ ರಿಪೋರ್ಟ್ ಬಂದಿದೆ.
ಜಿಲ್ಲೆಯಲ್ಲಿ ಈವರಗೆ ಯಾವುದೇ ಕೊರೊನೊ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಟ್ಟು 10 ಜನ ಕೊರೊನೊ ಶಂಕಿತ ಪೈಕಿ 7. ಜನರ ರಕ್ತ ಮಾದರಿ ನೆಗೆಟಿವ್ ಬಂದಿದೆ ಉಳಿದಂತೆ 3 ಜನರ ರಿಪೋರ್ಟ್ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.





