ಬಂಟ್ವಾಳ: ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಹಾಗೂ ಗ್ರಾಮ ಪಂಚಾಯತ್ ಸಂಗಬೆಟ್ಟು ಇವರ ಜಂಟಿ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿದ್ಧಕಟ್ಟೆ ಪರಿಸರದ ಸಾರ್ವಜನಿಕರಿಗೆ ನೋವೆಲ್ ಕರೋನ ವೈರಸ್ ಕುರಿತು ನೀವು ಮತ್ತು ನಿಮ್ಮವರನ್ನು ರಕ್ಷಿಸಿಕೊಳ್ಳಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮಾಹಿತಿದಾರರಾಗಿ ಆಗಮಿಸಿದ ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಆರತಿ ವಿದ್ಯಾರ್ಥಿಗಳಿಗೆ ನೋವೆಲ್ ಕರೋನ ವೈರಸ್ ಕುರಿತು ಮಾಹಿತಿ ನೀಡಿದರು. ಕರೋನ ವೈರಸನ್ನು ಹರಡದಂತೆ ಜಾಗೃತಿ ವಹಿಸಲು ಸೂಚಿಸಿದರು. ಈ ರೋಗದ ವಿರುದ್ದ ಹೋರಾಡುವ ಹಾಗೂ ರೋಗದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಹೆಚ್.ಕೆ. ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಕಾಲ ಕಾಲಕ್ಕೆ ಉದ್ಭವಿಸುವ ಹೊಸ ರೋಗಗಳು ಹಾಗೂ ವೈರಾಣುಗಳ ಮಾಹಿತಿಯನ್ನು ಪಡೆದು ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಲು ಸೂಚಿಸಿದರು. ಸಮಾಜದಲ್ಲಿ ಉದ್ಭವಿಸುವ ಅನೇಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ನಾಯಕತ್ವ ಗುಣಗಳಿಂದ ಸ್ಪಂದಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜ್ಯೋತಿ ಹಾಗೂ ಆಶಾ ಕಾರ್ಯಕರ್ತೆಯರಾದ ಶೋಭಾ, ಸೀತಾ ಹಾಗೂ ರೀಟಾ ಲಿಡಿಯಾ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕ ದೇವಿಪ್ರಸಾದ್ ಕಾರ್ಯಕ್ರಮವನ್ನು ಆಯೋಜಿದರು. ಗ್ರಂಥಪಾಲಕ ಡಾ. ಶ್ರೀನಿವಾಸ ಸ್ವಾಗತಿಸಿದರು. ಸಂಗಬೆಟ್ಟು ಕ್ಷೇತ್ರದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಸತೀಶ್ ಪೂಜಾರಿ, ಗ್ರಾ.ಪಂ.ನ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಅಂಗನವಾಡಿ ಶಿಕ್ಷಕಿ ಸರಸ್ವತಿ, ಸಹಾಯಕರು ಹಾಗೂ ವಿದ್ಯಾರ್ಥಿಗಳು, ಸಿದ್ಧಕಟ್ಟೆ ಮೆಸ್ಕಾಂ ನ ಕಿರಿಯ ಅಭಿಯಂತರ ತಿಲಕ್ ಕುಮಾರ್, ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಕೇಂದ್ರ ಮೈದಾನ, ವಾರದ ಸಂತೆ ಹಾಗೂ ಸಿದ್ಧಕಟ್ಟೆ ಪರಿಸರದ ಅಂಗಡಿ ಮುಂಗಟ್ಟುಗಳು, ಅಂಗನವಾಡಿ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಕಛೇರಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕರೋನ ವೈರಸ್ ಕುರಿತು ಮಾಹಿತಿ ಫಲಕ ಹಾಗೂ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here