


ವಿಟ್ಲ: ಪ್ರೀತಿಯೊಂದಿಗೆ ಸೇವೆ ಕಾರ್ಯಕ್ರಮವನ್ನು ಜನರಿಗೆ ಉಪಯೋಗವಾಗುವ ಹಾಗೆ ಮಾಡುವಲ್ಲಿ ವಿಟ್ಲ ಲಯನ್ಸ್ ಕ್ಲಬ್ ಯಶಸ್ವಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ೪೦೦ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಟ್ಲ ಕ್ಲಬ್ ಲಯನ್ಸ್ ಜಿಲ್ಲೆಯಲ್ಲಿ ಮುಂಚೂಣಿ ಸ್ಥಾನವನ್ನು ಪಡೆದಿದೆ ಎಂದು ಲಯನ್ಸ್ ರಾಜ್ಯಪಾಲ ರೋನಾಲ್ಡ್ ಜೋಮ್ಸ್ ಹೇಳಿದರು.
ವಿಟ್ಲ ಪ್ರೆಸ್ಕ್ಲಬ್ನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಪರಿಸರ ಸಂರಕ್ಷಣೆಯ ಜತೆಗೆ ನೀರಿನ ಮಿತ ಬಳಕೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಜಿಲ್ಲೆಯಲ್ಲಿ ಮಾಡಲಾಗಿದೆ. ಕೆರೆಗಳನ್ನು ಉಳಿಸುವ ಮಹತ್ವದ ಯೋಜನೆಯನ್ನು ಜಾರಿಗೆ ತರಲಾಗಿದೆ. ೪೮ ವರ್ಷದ ಇತಿಹಾಸದಲ್ಲಿ ಸಂಘದ ವಿಟ್ಲ ಕ್ಲಬ್ ಸದಸ್ಯರೊಬ್ಬರು ಗವರ್ನರ್ ಸ್ಥಾನಕ್ಕೆ ಏರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಅಶಸಕ್ತರಿಗೆ ಸಹಾಯ ಧನ, ಶಾಲೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಮೂಲಕ ಸುಮಾರು ೨೦ ಲಕ್ಷ ಯೋಜನೆಯನ್ನು ಸಮಾಜಕ್ಕೆ ನೀಡಲಾಗಿದೆ. ಕ್ಲಬ್ಗೆ ಸ್ವಂತ ನಿವೇಶನ ಖರೀದಿ ಮಾಡುವ ಮೂಲಕ ಮುಂದಿನ ದಿನದಲ್ಲಿ ದೊಡ್ಡ ಯೋಜನೆ ಅನುಷ್ಠಾನ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಪ್ರಥಮ ಉಪರಾಜ್ಯಪಾಲ ಡಾ. ಗೀತಾಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಕೋಶಾಧಿಕಾರಿ ಮೊಹಮ್ಮದ್ ಖಲಂದರ್ ಉಪಸ್ಥಿತರಿದ್ದರು.





