

ಮಂಗಳೂರು: ಕೊರೊನಾ ಸೋಂಕು ತಗುಲಿರುವ ಶಂಕೆ ಹಿನ್ನಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾನೆ. ಭಾನುವಾರ, ಮಾರ್ಚ್ 8 ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊರೊನಾ ಸೋಂಕು ಶಂಕಿತ ಪ್ರಯಾಣಿಕನೋರ್ವ ಬಂದಿಳಿದಿದ್ದ. ದುಬೈನಿಂದ ಮಂಗಳೂರಿಗೆ ಬಂದಿದ್ದ ಆ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ದುಬೈನಿಂದ ಮಂಗಳೂರಿಗೆ ಬಂದಿದ್ದ ಆ ವ್ಯಕ್ತಿಗೆ ಜ್ವರ ಮತ್ತು ನೆಗಡಿ ಇತ್ತು. ಹೀಗಾಗಿ, ಆತನನ್ನು ಆರೋಗ್ಯಾಧಿಕಾರಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಳಿಕ ಆತನ ರಕ್ತದ ಮಾದರಿಯನ್ನು ಲ್ಯಾಬ್ ಗೆ ರವಾನಿಸಿದ್ದರು. ಕೊರೊನಾ ಶಂಕೆ ಇದ್ದದ್ರಿಂದ ಆತನನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು. ಬ್ಲಡ್ ರಿಪೋರ್ಟ್ ಬರುವ ಮುನ್ನವೇ ಆ ವ್ಯಕ್ತಿ ಆಸ್ಪತ್ರೆಯಿಂದ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾನೆ. ವೈದ್ಯರು ನೀಡಿದ ಸಲಹೆಯನ್ನು ಧಿಕ್ಕರಿಸಿ ಆ ಪ್ರಯಾಣಿಕ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಆರೋಗ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಕೂಡಲೆ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಆತನ ಹಿನ್ನಲೆಯನ್ನು ಪಡೆದುಕೊಂಡು ಆ ವ್ಯಕ್ತಿಯ ಮನೆಗೆ ಭೇಟಿ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೆ ಆ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆತರಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.







