Wednesday, October 25, 2023

ವಿಟ್ಲ: ಲಕ್ಷಾಂತರ ರೂ. ಮೌಲ್ಯದ ನಗದು ಕಳವು

Must read

ಬಂಟ್ವಾಳ: ಮನೆಯ ಶೌಚಾಲಯದ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವುಗೈದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಅಳಿಕೆ ಗ್ರಾಮದ ಬೈರಿಕಟ್ಟೆ ಕರಡಿಗುಳಿ ಎಂಬಲ್ಲಿ ನಡೆದಿದ್ದು ಈ ಬಗ್ಗೆ ದೂರು ದಾಖಲಾಗಿದೆ.

ಇಲ್ಲಿನ ಗಣಪತಿ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ಗಾರೆ ಕೆಲಸ ಮಾಡುವ ಗಣಪತಿ ಮತ್ತು ಅವರ ಪತ್ನಿ ಆಯುರ್ವೇದ ಔಷಧಿ ತಯಾರಿಕೆಯ ಕೂಲಿ ಕೆಲಸ ಮಾಡುವ ಕವಿತಾ ಎಂದಿನಂತೆ ಸೋಮವಾರ ಬೆಳಗ್ಗೆ 8:30ರ ವೇಳೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು ಸಂಜೆ 5:15ರ ವೇಳೆಗೆ ಕವಿತಾ ಅವರು ಮನೆಗೆ ಬಂದು ಶೌಚಾಲಯಕ್ಕೆ ತೆರಳಿದಾಗ ಶೌಚಾಲಯದ ಗೋಡೆಯನ್ನು ಒಬ್ಬ ಮನುಷ್ಯ ಒಳ ಪ್ರವೇಶಿಸುವಷ್ಟು ಆಕಾರದಲ್ಲಿ ಕೊರೆಯಲಾಗಿತ್ತು. ಅವರು ಕೂಡಲೇ ಮನೆಯ ಕೊಠಡಿಗೆ ತೆರಳಿ ನೋಡಿದಾಗ ಕೊಠಡಿಯಲ್ಲಿದ್ದ ಕಪಾಟು ತೆರೆದಿತ್ತು. ಅಲ್ಲದೆ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಕಳವಾಗಿತ್ತು ಎಂದು ಗಣಪತಿ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಕಿವಿಯ 2 ಗ್ರಾಂ ತೂಕದ ಒಂದು ಜೊತೆ ಚಿನ್ನದ ಗುಂಡು, ಅಂದಾಜು 14 ಗ್ರಾಂ ತೂಕದ ಎರಡು ಜೊತೆ ಚಿನ್ನದ ಬೆಂಡೋಲೆ, ಅಂದಾಜು ಎರಡೂವರೆ ಪವನ್ ತೂಕದ ಚಿನ್ನದ ಕನಕ ಮಾಲೆ, ಅಂದಾಜು 8 ಗ್ರಾಂ ತೂಕದ ಚಿನ್ನದ ಸರ, 2 ಗ್ರಾಂ ತೂಕದ ಚೈನ್, ಅಂದಾಜು 6 ಗ್ರಾಂ ತೂಕದ ಮೂರು ಜೊತೆ ಕೈ ಉಂಗುರ ಕಳವಾಗಿದೆ. ಇವುಗಳ ಒಟ್ಟು ಅಂದಾಜು 50 ಗ್ರಾಂ ಆಗಿದ್ದು ಒಟ್ಟು 1,50,000 ರೂ. ಮೌಲ್ಯ ಆಗಿದೆ. ಹಾಗೂ 1,800 ರೂ. ನಗದು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ವಿಟ್ಲ ಎಸ್‌. ಐ.ವಿನೋದ್ ರೆಡ್ಡಿ ಹಾಗೂ ವಿಟ್ಲ ಸಿಬ್ಬಂದಿ ಭೇಟಿ ನೀಡಿದರು.
ಶ್ವಾನದಳ, ಬೆರಳಚ್ಚು ತಜ್ಞರು ಬಂದಿದ್ದಾರೆ

More articles

Latest article