



ಬಂಟ್ವಾಳ: ಮಿತ್ತನಡ್ಕ ಶಾಲೆಯ ವಿದ್ಯಾರ್ಥಿಗಳು ಸೇರಿ ಒಟ್ಟು 16 ಮಂದಿಗೆ ಫೆ.26ರಂದು ವಾಂತಿ-ಬೇಧಿಯ ಸಮಸ್ಯೆ ಕಂಡುಬಂದಿದೆ. ಪ್ರಸ್ತುತ ಅಲ್ಲಿನ ನೀರು ಹಾಗೂ ಬೇಧಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಕೈಸೇರಿದ ಬಳಿಕ ಕಾರಣ ತಿಳಿಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಅವರು ಗುರುವಾರ ತಾ.ಪಂ.ನ ಎಸ್ಜಿಎಸ್ವೈ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಉಸ್ಮಾನ್ ಕರೋಪಾಡಿ ಅವರು, ಮಿತ್ತನಡ್ಕ ಶಾಲೆಯ ವಿದ್ಯಾರ್ಥಿಗಳ ವಾಂತಿ-ಬೇಧಿ ಸಮಸ್ಯೆಗೆ ಕಾರಣ ಕೇಳಿದರು. ಫೆ. 26ರಂದು ಈ ರೀತಿ ವಾಂತಿ ಬೇಧಿಯ ಸಮಸ್ಯೆ ಕಂಡುಬಂದಿದ್ದು, ಮೊದಲ ದಿನ 6 ಮಂದಿ, 2ನೇ ದಿನ 2 ಮಂದಿ ಹಾಗೂ 3ನೇ ದಿನ 6 ಮಂದಿಗೆ ಈ ರೀತಿ ಆರೋಗ್ಯ ಏರುಪೇರು ಕಂಡುಬಂದಿತ್ತು. ಪಸ್ತುತ ಎಲ್ಲರೂ ಆರೋಗ್ಯದಿಂದಿದ್ದಾರೆ. ಬಾವಿ ಹಾಗೂ ಟ್ಯಾಂಕ್ನ ನೀರನ್ನು ಪರೀಕ್ಷೆಗೆ ಕಳುಹಿಸಿದಾಗ ಟ್ಯಾಂಕ್ನ ನೀರು ಕಲುಷಿತವಾಗಿ ಕಂಡುಬಂದಿತ್ತು. ಈಗ ಬಾವಿ ಹಾಗೂ ಟ್ಯಾಂಕ್ನ ನೀರು ಉಪಯೋಗಿಸುತ್ತಿಲ್ಲ. ಖಾಯಿಲೆ ಕಂಡುಬಂದಿರುವವರ ಭೇಧಿಯನ್ನೂ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಾಲೆಯ ಅಕ್ಕಿ, ಬೇಳೆ ಹಾಗೂ ಎಣ್ಣೆಯ ಸ್ಯಾಂಪಲನ್ನು ಮೈಸೂರಿನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮಾಹಿತಿ ನೀಡಲಾಗುತ್ತದೆ ಎಂದರು. ತಾ.ಪಂ.ನ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ ಸಭೆಯು ಸಮಿತಿ ಅಧ್ಯಕ್ಷ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2019-20ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನದ ಖರ್ಚು-ವೆಚ್ಚಗಳ ಕುರಿತು ಅಧ್ಯಕ್ಷರು ಎಲ್ಲಾ ಇಲಾಖಾಧಿಕಾರಿಗಳಿಂದ ಅಧ್ಯಕ್ಷರು ಪ್ರಗತಿ ಪರಿಶೀಲಿಸಿದರು. ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ತಿಗೊಳಿಸುವಂತೆ ಸೂಚಿಸಲಾಯಿತು. ಆರೋಗ್ಯ ಇಲಾಖೆಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.
ತಾ.ಪಂ.ನ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯು ಸಮಿತಿ ಅಧ್ಯಕ್ಷ, ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊರೊನಾ ವೈರಸ್ ಎಚ್ಚರಿಕೆ ಕುರಿತಂತೆ ಎಲ್ಲರಿಗೂ ಮಾಹಿತಿ ತಲುಪಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಽಕಾರಿಗಳಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಸಮಿತಿ ಸದಸ್ಯರಾದ ಯಶವಂತ ಪೊಳಲಿ, ಮಂಜುಳಾ ಕುಶಲ ಎಂ., ಬೇಬಿ, ರಮೇಶ್ ಕುಡ್ಮೇರು, ಹೈದರ್ ಕೈರಂಗಳ, ಧನಲಕ್ಷೀ ಸಿ.ಬಂಗೇರ, ಶಿವಪ್ರಸಾದ್ ಮಂಜುಳಾ ಸದಾನಂದ್, ವನಜಾಕ್ಷಿ ಬಿ, ಶೋಭಾ ರೈ ಉಪಸ್ಥಿತರಿದ್ದರು. ತಾ.ಪಂ.ಕಾರ್ಯನಿರ್ವಹಣಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.






