


ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಪತ್ರಕರ್ತರ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಇದೇ ಮೊದಲ ಬಾರಿ ಮಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾ.7 ಮತ್ತು 8 ರಂದು ಎರಡು ದಿನಗಳ ಕಾಲ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ.
ಮಾ.7 ರಂದು ಬೆಳಿಗ್ಗೆ ಕುದ್ಮುಲ್ ರಂಗರಾವ್ ಪುರಭವನದ ದಿ. ವಡ್ಡರ್ಸೆ ರಘರಾಮ ಶೆಟ್ಟಿ ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಸಾನಿದ್ಯದಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಲಿರುವರು. ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಸಮ್ಮೇಳನದ ಆಶಯ ಭಾಷಣ ಮಾಡಲಿರುವರು. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಮತ್ತಿತರ ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ನಂತರ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಧ್ಯಕ್ಷತೆಯಲ್ಲಿ ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಪ್ರಜಾವಾಣಿಯ ಸಂಪಾದಕ ರವೀಂದ್ರ ಭಟ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಮಾಧ್ಯಮ ಎಂಬ ಗೋಷ್ಠಿ ನಡೆಯಲಿದೆ.
ರವಿವಾರ ಮಾ.8 ರಂದು ಬೆಳಿಗ್ಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಿಚಾರಗೋಷ್ಠಿ ಉದ್ಘಾಟಿಸಲಿದ್ದಾರೆ. ಕರಾವಳಿ ಅಭಿವೃದ್ಧಿ ಮತ್ತು ಪ್ರವಾಸೋಧ್ಯಮ ಎನ್ನುವ ವಿಚಾರದ ಬಗ್ಗೆ ವಿಚಾರಗೋಷ್ಠಿ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಕಾ. ಗಣೇಶ್ ಕಾರ್ಣಿಕ್ ಪ್ರಸ್ತಾವನೆ ಮಾಡಲಿದ್ದಾರೆ ಹಾಗೂ ಮತ್ತಿತರ ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಈ ವಿಚಾರಗೋಷ್ಠಿಯ ಉದ್ಘಾಟನೆ ಮಾಡಲಿದ್ದಾರೆ. ಆಯಿಷಾ ಖಾನಂ ಅಧ್ಯಕ್ಷತೆಯಲ್ಲಿ ಭಾರತೀಯ ಪತ್ರಿಕೋದ್ಯಮ ವಿಚಾರದಲ್ಲಿ ಎರಡನೇ ಗೋಷ್ಠಿ ನಡೆಯಲಿದ್ದು, ವಿದೇಶಿ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರು ಹಿರಿಯ ಪತ್ರಕರ್ತೆ ನಿರ್ಮಲಾ ಎಲಿಗಾರ್ ಅಧ್ಗಕ್ಷತೆಯಲ್ಲಿ ಮಾಧ್ಯಮ ಮತ್ತು ಮಹಿಳೆ ಎಂಬ ವಿಚಾರದ ಬಗ್ಗೆ ಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ ನಂತರ ನಡೆಯುವ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾ. ಮಣಿವಣ್ಣನ್ ಉದ್ಘಾಟಿಸಲಿದ್ದಾರೆ. ಜನತಾ ಮಾಧ್ಯಮದ ಸಂಪಾದಕ ಆರ್.ಪಿ. ವೆಂಕಟೇಶ್ ಮೂರ್ತಿ ಅಧ್ಯಕ್ಷತೆಯಲ್ಲಿ ಗ್ರಾಮೀಣ ಪತ್ರಿಕೋದ್ಯಮ ಸವಾಲು ಎಂಬ ವಿಚಾರದ ಬಗ್ಗೆ ಗೋಷ್ಠಿ ನಡೆಯಲಿದೆ. ವಿವಿಧ ಗಣ್ಯರು ಭಾಗವಹಿಸಲಿರುವರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಹಿಸಲಿದ್ದು. ಉಪಾಧ್ಯಕ್ಷ ಮತ್ತಿಕೆರೆ ಜಯರಾಮ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ವರದಿ ವಾಚಿಸಲಿದ್ದಾರೆ.
ಸನ್ಮಾನ ಸಮಾರಂಭ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮತ್ತು ಪದಾಧಿಕಾರಿಗಳಿಗೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ.ಯು.ಪಿ. ಶಿವಾನಂದ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಉದಯವಾಣಿ ಸಹಾಯಕ ಸಂಪಾದಕ ಮನೋಹರ್ ಪ್ರಸಾದ್ ಅವರನ್ನು ಅವರಿಗೆ ವಿಶೇಷ ಅಭಿನಂದನೆ ನಡೆಯಲಿದೆ ನಂತರ ಕೆಯುಡಬ್ಯ್ಲುಜೆ ದತ್ತನಿಧಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ನಡೆಯಲಿದೆ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಎಂ.ವೀರಪ್ಪ ಮೊಯ್ಲಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭಾಗವಹಿಸಲಿದ್ದಾರೆ.
ಭಾನುವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮಾಧು ಸ್ವಾಮಿ, ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಅನೇಕ ಗಣ್ಯರುಗಳು ಭಾಗಿಯಾಗಲಿದ್ದಾರೆ.





