



ಬಂಟ್ವಾಳ: ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ, ಇದು ಮಾದರಿಯಾದ ಕಾರ್ಯ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ಹೇಳಿದರು. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಮಾ.8 ರಂದು ನಡೆಯಲಿರುವ 12ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಪೂರ್ವಭಾವಿಯಾಗಿ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಮಾ.1 ರಂದು ನಡೆದ ವಿವಾಹದ ಸಾಮೂಹಿಕ ನಿಶ್ಚಿತಾರ್ಥದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮೂಹಿಕ ವಿವಾಹದ ದಂಪತಿಗೆ ಸಿಗುವ ಸರ್ಕಾರದಿಂದ ಸಿಗುವ ಸವಲತ್ತನ್ನು ಒದಗಿಸಲು ಕ್ರಮಕೈಗೊಳ್ಳುತ್ತೇನೆ ಎಂದ ಅವರು, ಪರಸ್ಪರ ಅರ್ಥೈಸಿಕೊಂಡು ಬದುಕು ಸಾಧಿಸಬೇಕು ಜೊತೆಗೆ ಮುಖದಲ್ಲಿನ ನಿರಂತರ ನಗು ದಾಂಪತ್ಯ ಬದುಕನ್ನು ಸಂತಸಮಯವಾಗಿಸುತ್ತದೆ ಎಂದರು.
ಮೆಸ್ಕಾಂ ನ ಸುಪರಿಡೆಂಟ್ ಇಂಜಿನಿಯರ್ ಮಂಜಪ್ಪ ರವರು ಮಾತನಾಡಿ, ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯ ಮನಸ್ಥಿತಿಯನ್ನು ಅರಿತು ಕಾರ್ಯಕ್ರಮಗಳನ್ನು ರೂಪಿಸುವ ತುಂಗಪ್ಪ ಬಂಗೇರರು ಎಲ್ಲರಿಗೂ ಮಾದರಿ ಎಂದರು.
ಪಾಂಡವರಕಲ್ಲು ವ್ಯ.ಸೇ.ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿನ್ಸೆಂಟ್ ಡಿ’ಸೋಜ ಮಾತನಾಡಿ, ಗಂಡು ಹೆಣ್ಣಿನ ಸಮಾನ ಮನಸ್ಕ ಸ್ಥಿತಿ ದಾಂಪತ್ಯ ಬದುಕಿಗೆ ಶಕ್ತಿ ತರುತ್ತದೆ, ಈ ನಿಟ್ಟಿನಲ್ಲಿ ವಿವಾಹದ ಹೊಸ್ತಿಲಲ್ಲಿರುವ ಸಂಕಲ್ಪತೊಡಬೇಕು ಎಂದರು.
ತುಳುನಾಡ ರಕ್ಷಣಾ ವೇದಿಕೆ ಯ ರಮೇಶ್ ಶೆಟ್ಟಿ ಮಜಲೋಡಿ ವೇದಿಕೆಯಲ್ಲಿದ್ದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮತ್ತಿತರ ಸದಸ್ಯರು ಭಾಗವಹಿಸಿದ್ದರು.
ಪ್ರಗತಿಪರ ಕೃಷಿಕ ರವಿಪೂಜಾರಿ ಮತ್ತು ಪ್ರಗತಿಪರ ಕೃಷಿಕ ಗಿರೀಶ್ ಸಾಲ್ಯಾನ್ ಹೆಗ್ಡೆ ಬೆಟ್ಟು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ , ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಪರಸ್ಪರ ಬದಲಾಯಿಸಿಕೊಂಡರು. ವಧು ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. 10ಜೋಡಿ ವಧು-ವರರು ಸೇರಿದಂತೆ ಅವರವರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಸ್ವಾಗತಿಸಿದರು, ಕು.ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.





