ಉಜಿರೆ: ಯುವಜನತೆ ಜ್ಞಾನ ಮತ್ತು ವಿಜ್ಞಾನವನ್ನು ಸಮಾನ ಆಸಕ್ತಿಯಿಂದ ಅಧ್ಯಯನ ಮಾಡಿ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು. ಪ್ರಾಚೀನ ಕಾಲದಲ್ಲಿ ಋಷಿ-ಮುನಿಗಳು ಜಪ, ತಪ, ಧ್ಯಾನದ ಮೂಲಕ ಪ್ರಕೃತಿ, ದೇವರು, ಆಕಾಶ ಕಾಯಗಳು ಹಾಗೂ ಖಗೋಳ ಶಾಸ್ತ್ರದ ಬಗ್ಗೆ ಅಪಾರ ಜ್ಞಾನ ಸಂಗ್ರಹಿಸಿದ್ದರು. ಹಿಂದಿನ ಜ್ಞಾನವೆಲ್ಲ ಗೊಡ್ಡು ಸಂಪ್ರದಾಯ, ಮೂಡನಂಬಿಕೆ ಎಂದು ಕಡೆಗಣಿಸದೆ ಅವುಗಳ ದಾಖಲೀಕರಣ ಮಾಡಿ ಸಂರಕ್ಷಣೆ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ಶಾಸನ ಶಾಸ್ತ್ರದ ಬಗ್ಗೆ ಆಯೋಜಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ತನಗೆ ಪ್ರಾಚೀನ ವಸ್ತುಗಳು ಹಾಗೂ ಇತಿಹಾಸದ ಬಗ್ಗೆ ಹೆಚ್ಚಿನ ಆಸಕ್ತಿ, ಅಭಿಮಾನವಿದ್ದು, ಹಳೆ ವಸ್ತುಗಳ ಸಂಗ್ರಹದ ಹವ್ಯಾಸದಿಂದ ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯ ಹಾಗೂ ವಿಂಟೇಜ್ ಕಾರುಗಳ ಮ್ಯೂಸಿಯಂ ರೂಪಿಸಲು ಸಾಧ್ಯವಾಯಿತು. ಹಾಗಾಗಿ ಜನಸಾಮಾನ್ಯರಲ್ಲಿಯೂ ಈಗ ಅರಿವು, ಜಾಗೃತಿ ಉಂಟಾಗಿದ್ದು, ತಮ್ಮಲ್ಲಿರುವ ಅಪೂರ್ವ ಹಳೆ ವಸ್ತುಗಳನ್ನು ಬಿಸಾಡದೆ ಅಥವಾ ಮಾರಾಟ ಮಾಡದೆ ಧರ್ಮಸ್ಥಳಕ್ಕೆ ತಂದು ಕೊಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಅಮೂಲ್ಯ ತಾಳೆಗರಿ ಗ್ರಂಥಗಳು ಹಾಗೂ ತಾಡಪತ್ರಗಳ ಸಂಗ್ರಹವಿದ್ದು, ಆಸಕ್ತರಿಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಪ್ರಕೃತಿ ಚಿಕಿತ್ಸೆ ಹಾಗೂ ಆಯುರ್ವೇದ ಪದ್ಧತಿಯಿಂದ ದೀರ್ಘ ಆಯೂರಾರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಅವರು ಅಭಿಪ್ರಾಯ ಪಟ್ಟರು. ಅಮೂಲ್ಯ ಜ್ಞಾನ ಸಂಗ್ರಹ, ಸಂರಕ್ಷಣೆ ಹಾಗೂ ದಾಖಲೀಕರಣದ ಬಗ್ಗೆ ಯುವಜನತೆ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ಮೈಸೂರಿನ ಡಾ.ಎಂ.ಡಿ. ಸಂಪತ್, ಡಾ.ಟಿ.ಎಸ್. ರವಿಶಂಕರ್, ಡಾ.ಪಿ. ಎನ್. ನರಸಿಂಹಮೂರ್ತಿ, ಜೈ ಪ್ರಕಾಶ್ ಮತ್ತು ಡಾ.ಕೃಷ್ಣೇಂದುರೇ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸತೀಶ್ಚಂದ್ರ ಸ್ವಾಗತಿಸಿ, ರವಿಶಂಕರ್‌ ವಂದಿಸಿದರು. ಪ್ರೊ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಕಾರ್ಕಳದಿಂದ ಧರ್ಮಸ್ಥಳಕ್ಕೆ ಬಾಹುಬಲಿ ಮೂರ್ತಿ ಸಾಗಾಣಿಕೆಯ ವೀಡಿಯೊ ಪ್ರದರ್ಶನ ನಡೆಯಿತು.
ಅಮೃತವರ್ಷಿಣಿ ಸಭಾ ಭವನದಲ್ಲಿ ದೇಶದ ವಿವಿಧ ಭಾಗಗಳ ಶಾಸನಗಳ ಪ್ರದರ್ಶನ ಆಯೋಜಿಸಿದ್ದು ಶುಕ್ರವಾರ ಮತ್ತು ಶನಿವಾರ ವೀಕ್ಷಣೆಗೆ ಮುಕ್ತ ಅವಕಾಶವಿದೆ.

ಇಂದು ಸಮಾರೋಪ ಸಮಾರಂಭ: ಶನಿವಾರ ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು ಸಮಾರೋಪ ಭಾಷಣ ಮಾಡುವರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here