ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಸ್ನೇಹ ಸಂಗಮ ಫೆ.23 ರಂದು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಬಂದಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಲಾಯಿತು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಮಾತನಾಡುತ್ತಾ, ವಿದ್ಯಾಸಂಸ್ಥೆ 1980ರಂದು ಪ್ರಾರಂಭವಾಗುವ ಸಂದರ್ಭದಲ್ಲಿ ಈ ಸಂಸ್ಥೆಗೆ ಮತೀಯವಾದಿಗಳಿಂದ ನಾವು ಅನುಭವಿಸಿದ ಸಮಸ್ಯೆ, ಅನಂತರ ಶಾಲೆಯ ಶಿಲಾನ್ಯಾಸ ನಡೆಸುವ ಸಂದರ್ಭದಲ್ಲಿ ವಿರೋಧಿಗಳ ಕುಮ್ಮಕ್ಕಿನಿಂದ ಸರಕಾರ ಹಾಕಿರುವ ನಿಷೇಧಾಜ್ಞೆಯನ್ನು ನೆನಪಿಸಿದರು. ಆದರೂ ನಾವು ಅದನ್ನೆಲ್ಲ ಹಿಮ್ಮೆಟ್ಟಿ ಮುಂದಕ್ಕೆ ಸಾಗುತ್ತಾ ಹೋದೆವು ಎಂದರು. ಇದೀಗ ವಿದ್ಯಾಕೇಂದ್ರವು ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಪೂರ್ವ ಹಾಗೂ ಪದವಿ ವಿದ್ಯಾಲಯಗಳನ್ನೊಳಗೊಂಡಿದೆ.

73 ವಿದ್ಯಾರ್ಥಿಗಳಿಂದ ಪ್ರಾರಂಭವಾದ ವಿದ್ಯಾಸಂಸ್ಥೆ ಇದೀಗ 3500ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ವಿದ್ಯಾಸಂಸ್ಥೆಯ ಅಭಿವೃದ್ದಿಯ ಬಗ್ಗೆ ತಿಳಿಸುತ್ತಾ ಇಲ್ಲಿನ ವ್ಯವಸ್ಥೆಗಳನ್ನು ವಿವರಿಸಿದರು. ಮುಂದಿನ ಯೋಜನೆಗಳ ಬಗ್ಗೆಯೂ ಹೇಳಿದರು. ಹೀಗೆ ವಿದ್ಯಾಕೇಂದ್ರದ 40 ವರ್ಷದ ಹಾದಿಯನ್ನು ಸವಿವರವಾಗಿ ಸಭೆಯಲ್ಲಿ ತಿಳಿಸಿದರು.


ಮುಖ್ಯ ಅತಿಥಿಯಾಗಿ ಚಂದನ ಟಿವಿಯ ’ಥಟ್ ಅಂತ ಹೇಳಿ’ ಕಾರ್‍ಯಕ್ರಮದ ನಿರೂಪಕ ಪ್ರೊ. ನಾ.ಸೋಮೇಶ್ವರರು ಮಾತನಾಡುತ್ತಾ, ಹಿರಿಯ ವಿದ್ಯಾರ್ಥಿಗಳು ವಿದ್ಯಾಕೇಂದ್ರದ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು. ಆರ್ಥಿಕ ಸಹಕಾರ, ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುವುದು ಅಥವಾ ವಿದ್ಯಾಕೇಂದ್ರದ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಹೀಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಲ್ಲಿ ಈ ವಿದ್ಯಾಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅನುಕೂಲವಾಗುವುದು ಎಂದರು. ಇಲ್ಲಿ ನೀಡುವ ಸಂಸ್ಕಾರಯುತ ಶಿಕ್ಷಣ ನಿಜಕ್ಕೂ ಮೆಚ್ಚುವಂತದ್ದೇ ಆಗಿದೆ ಎಂದರು. ಇಂತಹ ಸಂಸ್ಥೆಗಳು ವಿವಿಧ ಕಡೆಗಳಿಗೆ ವಿಸ್ತಾರವಾಗಲಿ, ಇನ್ನೂ ಎತ್ತರಕ್ಕೆ ಬೆಳೆಯಲಿ, ಇದರ ಬೆಳವಣಿಗೆಯಲ್ಲಿ ನಾವೆಲ್ಲ ಪಾಲ್ಗೊಳ್ಳೋಣ ಎಂದು ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಎಲ್ಲಾ ವಿಭಾಗಳಿಗೆ ಪ್ರತ್ಯೇಕ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಲ್ಲಾ ವಿಭಾಗಗಳ ಹಿರಿಯ ವಿದ್ಯಾರ್ಥಿಗಳನ್ನೊಳಗೊಂಡ ಶ್ರೀರಾಮ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಿ ಸಭೆಯಲ್ಲಿ ಘೋಷಣೆ ಮಾಡಲಾಯಿತು.

ಮಧ್ಯಾಹ್ನದ ನಂತರ ’ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್ ಎನ್. ಹಾಗೂ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಮೋನಪ್ಪ ಕಲ್ಲಡ್ಕ ಉಪಸ್ಥಿತರಿದ್ದರು.
ಕ. ಕೃಷ್ಣಪ್ಪ ಸ್ವಾಗತಿಸಿ, ಸುಜಿತ್ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೈತ್ರಾಭಾಮತಿ ವಂದಿಸಿ, ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here