



ಬಂಟ್ವಾಳ: ಇರಾ ಗ್ರಾಮದ ಸಂಪಿಲ ಕೊಡಂಗೆ ನಾಗರಿಕರ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯಾದ ಕಿರು ಸೇತುವೆ ಕಾಮಗಾರಿಗೆ ಇಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಹಾಗೂ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಶಾಲಾ ವಿದ್ಯಾರ್ಥಿಗಳು ಶಿಲಾನ್ಯಾಸ ನೆರವೇರಿಸಿದರು.
ಸಂಪಿಲ ಕೊಡಂಗೆ ಜನವಸತಿ ಪ್ರದೇಶವನ್ನು ಸಂಪರ್ಕಿಸುವ ಬೃಹತ್ ತೋಡಿಗೆ ಸೇತುವೆ ಇಲ್ಲದ ಕಾರಣ ಈ ಪ್ರದೇಶದ ನಾಗರಿಕರು ಮುಖ್ಯವಾಗಿ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸುತ್ತಿ ಬಳಸಿ ನಡೆದಾಡುವ ಸ್ಥಿತಿ ಸುಮಾರು 50 ವರ್ಷಗಳಿಂದ ಇದ್ದು, ತೀವ್ರವಾದ ತೊಂದರೆಗಳನ್ನು ಅನುಭವಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿರುವುದನ್ನು ಸ್ಮರಿಸಬಹುದು. ಈ ಬಗ್ಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು, ಸ್ಥಳೀಯರು ನೀಡಿದ ಮನವಿಗೆ ಸ್ಪಂದಿಸಿ, ರೂ. 25ಲಕ್ಷ ಅಂದಾಜು ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಅನುಷ್ಠಾನಗೊಳ್ಳಲಿರುವ ಶಾಲಾ ಸೇತುವೆ ಯೋಜನೆಯನ್ನು ಮಂಜೂರುಗೊಳಿಸುವ ಮೂಲಕ ಸುದೀರ್ಘ ಕಾಲದ ಬೇಡಿಕೆಗೆ ಸ್ಪಂದಿಸಿರುವುದು ವಿಶೇಷವಾಗಿದೆ.
ಶಾಸಕ ಯು.ಟಿ.ಖಾದರ್, ಜಿ.ಪಂ. ಸದಸ್ಯೆ ಮಮತ ಡಿ.ಎಸ್ ಗಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ಜನಪ್ರತಿನಿಧಿಗಳನ್ನು ಸ್ಥಳೀಯರು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಲೆನ್ನಿ ಡಿಸೋಜ, ಲೋಕೋಪಯೋಗಿ ಇಂಜಿನಿಯರ್ ರವೀಂದ್ರ ಶೆಟ್ಟಿ, ಗುತ್ತಿಗೆದಾರರಾದ ಸುದೀಪ್ ಐತಾಳ್, ಗಣ್ಯರಾದ ಅಶ್ರಫ್ ಸಂಪಿಲ, ರಘುರಾಮ ನಾಯಕ್, ಉಸ್ಮಾನ್ ಕುರಿಯಾಡಿ, ಹೆನ್ರಿ ಡಿಸೋಜ, ರಿತೇಶ್ ಇರಾ, ಮತ್ತಿತರರು ಉಪಸ್ಥಿತರಿದ್ದರು.






