Friday, October 20, 2023

ಪುದು ಗ್ರಾ.ಪಂ. ನೂತನ ಸಭಾಭವನ ಉದ್ಘಾಟನೆ

Must read

ಬಂಟ್ವಾಳ: ಪುದು ಗ್ರಾಮ ಪಂಚಾಯತ್‌ನ ನೂತನ ಸಭಾಭವನ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇದೊಂದು ಐತಿಹಾಸಿಕ ಕೆಲಸವಾಗಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಶಾಸಕರ ಮತ್ತು ಗ್ರಾಮ ಪಂಚಾಯತ್‌ನ 16 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಪುದು ಗ್ರಾಮ ಪಂಚಾಯತ್‌ನ ನೂತನ ಸಭಾಭವನವನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲು ಸುಸಜ್ಜಿತ ಸಭಾಭವನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾದ ಸಭಾಭವನವನ್ನು ನಿರ್ಮಿಸಿರುವ ಪುದು ಗ್ರಾಮ ಪಂಚಾಯತ್ ಆಡಳಿತ ಈ ಸಭಾಭವನದಲ್ಲಿ ಆರೋಗ್ಯಕರ ಚರ್ಚೆ ನಡೆಸಿ ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ರಸ್ತೆ, ನೀರು, ಶಾಲೆ, ಅಂಗನವಾಡಿ ಸಹಿತ ಗ್ರಾಮಸ್ಥರ ಸರ್ವ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇದರಿಂದಾಗಿ ಈ ಗ್ರಾಮದ ಪ್ರತೀ ರಸ್ತೆಯು ಕಾಂಕ್ರಿಟ್ ರಸ್ತೆಗಳಾಗಿ ಉತ್ತಮ ಗುಣಮಟ್ಟದಿಂದ ಕೂಡಿದೆ. ಇನ್ನೂ ಈ ಗ್ರಾಮಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಅಭಿವೃದ್ಧಿಯಲ್ಲಿ ಪುದು ಗ್ರಾಮ ಪಂಚಾಯತ್ ಇಡೀ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯತ್ ಆಗಿದ್ದು, ಈ ಗ್ರಾಮದ ಪ್ರತೀ ಮನೆಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕುಡಿಯುವ ನೀರು ಪೂರೈಕೆಗೆ ಹೊಸ ಯೋಜನೆಯೊಂದನ್ನು ರೂಪಿಸಲಾಗುವುದು. ಪುದು, ಅಡ್ಯಾರ್, ಮೇರಮಜಲು, ಕೊಡ್ಮಾಣ್‌ಗಳನ್ನು ಸೇರಿಸಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಗ್ರಾಮದ ಪ್ರತೀಯೊಬ್ಬರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಗ್ರಾಮದಲ್ಲಿ ಸರಕಾರಿ ಪಿ.ಯು. ಕಾಲೇಜು ಸ್ಥಾಪನೆಗೆ ಬೇಡಿಕೆ ಇದ್ದು ಈ ಹಿನ್ನೆಲೆಯಲ್ಲಿ ಸುಜೀರು ಪ್ರೌಢಶಾಲೆಯನ್ನು ಪಿ.ಯು. ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲು ಸರಕಾರಕ್ಕೆ ಪ್ರಸ್ತಾವ ಮಾಡಲಾಗಿದೆ. ಶೀಘ್ರವೇ ಇದು ಈಡೇರಲಿದೆ ಎಂದು ಯು.ಟಿ.ಖಾದರ್ ಭರವಸೆ ನೀಡಿದರು.

ಗ್ರಾಮದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೆಲ್ಲವೂ ಗ್ರಾಮಸ್ಥರು ನನಗೆ ನೀಡಿರುವ ಆಶೀರ್ವಾದ ಫಲವಾಗಿದೆ. ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲು ಜನರು ನನಗೆ ಇನ್ನೂ ಆಶೀರ್ವಾದ ನೀಡಬೇಕು. ಯಾವ ಅಭಿವೃದ್ಧಿ ಕಾರ್ಯಗಳು ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದರೂ ಅದನ್ನೆಲ್ಲಾ ಶಾಸಕನಾಗಿ, ಸಚಿವನಾಗಿ ಮಾಡಿ ತೋರಿಸಿದ್ದೇನೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯದಲ್ಲಿ ಎಂದೂ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಎಂದೂ ಜಾತಿ, ಧರ್ಮವನ್ನು ಸೇರಿಸಬಾರದು. ಜಾತಿ, ಧರ್ಮಕ್ಕಿಂತ ದೇಶ ಮುಖ್ಯವಾಗಿದೆ. ನಮಗೆಲ್ಲಾ ಭಾರತ ಒಂದೇ. ಭಾರತೀಯರಾದ ನಾವೆಲ್ಲರೂ ಒಂದೇ. ಇದುವೇ ನಮ್ಮ ಧರ್ಮವಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ 25 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ವಿವಿಧ ಫಲಾನುಭವಿಗಳಿಗೆ 62 ಸಿಂಟೆಕ್ಸ್ ಟ್ಯಾಂಕ್, 2 ಟೈಲರಿಂಗ್ ಯಂತ್ರ, 2 ವೀಲ್ ಚೆಯರ್, 4 ಸೋಲರ್ ಲೈಟ್‌ಗಳನ್ನು ಶಾಸಕ ಯು.ಟಿ.ಖಾದರ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್ ಮತ್ತು ಸಭಾಭವನದ ಇಂಜಿನಿಯರ್ ರವಿಚಂದ್ರ, ಗುತ್ತಿಗೆದಾರ ಲತೀಫ್, ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಶುಭ ಹಾರೈಸಿದರು. ಪುದು ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ ಸುಹೀರು, ಬಂಟ್ವಾಳ ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪಿಡಿಒ ಪ್ರೇಮಲತಾ, ಕಾರ್ಯದರ್ಶಿ ಅಶ್ವಿನಿ ಬಿ. ಹಾಗೂ ಗ್ರಾಪಂ ಎಲ್ಲಾ ಹಾಲಿ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸ್ವಾಗತಿಸಿದರು. ಶಿಕ್ಷಕ ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.

More articles

Latest article