


ಕನ್ಯಾನ: ಉನ್ನತ ಗುಣಮಟ್ಟದ ಆಲೋಚನೆಗಳಿಂದ ಸುಂದರ ಬದುಕು ರೂಪುಗೊಳ್ಳುತ್ತದೆ. ಇಂದಿನ ಯುವಕರಲ್ಲಿ ಶ್ರದ್ಧೆಯ ಕೊರತೆ, ವ್ಯಾಪಾರೀಕರಣ ಬೆಳೆಯುತ್ತಿದ್ದು, ಜ್ಞಾನವನ್ನು ಆವಿಷ್ಕರಿಸಿ ಬೆಳೆಸಿಕೊಂಡು ಬದುಕನ್ನು ಬೆಳಗಿಸಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಕನ್ಯಾನದ ಒಡಿಯೂರು ಶ್ರೀ ಗುರುದೇವ ಐ.ಟಿ.ಐಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಗತಿ ಎಜುಕೇಷನಲ್ ಫೌಂಡೇಶನ್ ಪುತ್ತೂರು ಇದರ ಅಧ್ಯಕ್ಷ ಗೋಕುಲ್ನಾಥ ಪಿ.ವಿ ಅವರು ಮಾತನಾಡಿ ಕೆಲಸವನ್ನು ಇಷ್ಟ ಪಟ್ಟು ಮಾಡಿದಲ್ಲಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಉತ್ತಮ ಅಧ್ಯಾಪಕರನ್ನು ಹೊಂದಿದ ಈ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಪೂರ್ಣ ಉಪಯೋಗವನ್ನು ಮಾಡಿಕೊಳ್ಳಿ ಎಂದರು.
ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಸ್ಕೂಲ್ ಪ್ರಿನ್ಸಿಪಾಲ್ ರಾಮಚಂದ್ರ ಭಟ್ ಮಾತನಾಡಿಪೇಟೆ, ನಗರಗಳಿಗೆ ಹೋಗಿ ವಿದ್ಯಾರ್ಜನೆ ಮಾಡುವುದಕ್ಕಿಂತ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಇಂತಹ ಗ್ರಾಮೀಣ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.
ಸಂಸ್ಥೆಯ ಪ್ರಿನ್ಸಿಪಾಲ್ ಕರುಣಾಕರ ಎನ್.ಬಿ ಸ್ವಾಗತಿಸಿ, ಪ್ರಸ್ತಾವಿಸಿದರು. ಒಡಿಯೂರು ಶ್ರೀ ವಿದ್ಯಾಪೀಠದ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಮುಖ್ಯ ಶಿಕ್ಷಕ ಜಯಪ್ರಕಾಶ ಶೆಟ್ಟಿ, ಕೆ.ಪಿ.ರಘುರಾಮ ಶೆಟ್ಟಿ ಕನ್ಯಾನ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಮೋಹನ ಎ. ವರದಿ ವಾಚಿಸಿದರು. ರಾಜೇಶ್ ಪೂಜಾರಿ ಕೆ. ವಂದಿಸಿ, ಅಶ್ವಥ್ ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಇದೇ ಸಂದರ್ಭದಲ್ಲಿ ೨೦೧೮-೨೦ನೇ ಸಾಲಿನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂಸ್ಥೆಗೆ ಡಯಾಸ್ನ್ನು ಕೊಡುಗೆಯಾಗಿ ನೀಡಿದ್ದು, ಒಡಿಯೂರು ಸ್ವಾಮೀಗಳವರಿಗೆ ಹಸ್ತಾಂತರಿಸಿದರು.





