


ಬಂಟ್ವಾಳ: ರಂಗ ಭೂಮಿ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪನೆಗೊಂಡ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು ಇದರ ಸದಸ್ಯತ್ವ ಅಭಿಯಾನ ಮತ್ತು ಮಾಹಿತಿ ಕಾರ್ಯಕ್ರಮ ಫೆ.9ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಸಭಾಭವನದಲ್ಲಿ ಜರಗಿತು.
ಸೇವಾ ಪರಿಷತ್ ಗೌರವ ಸಲಹೆಗಾರ, ಹಿರಿಯ ನಾಟಕಕಾರ ವಿಜಯ್ ಕುಮಾರ್ ಕೋಡಿಯಾಲ್ಬಲ್ ಅವರು ಮಾತನಾಡಿ, ರಂಗಭೂಮಿ ಬೆಳವಣಿಗೆಗೆ ಮತ್ತು ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪನೆಗೊಂಡ ಸಂಘಟನೆಯನ್ನು ಬಲಗೊಳಿಸಿ ಆ ಮೂಲಕ ಕಲಾವಿದರ ಬೇಡಿಕೆಗಳನ್ನು ಈಡೇರಿಸಲು ಕಲಾವಿದರು ಸಂಘಟಿತರಾಗಬೇಕು ಎಂದು ಹೇಳಿದರು.
ಸಮಿತಿ ಸ್ಥಾಪಕ ಸದಸ್ಯ, ಹಿರಿಯ ನಾಟಕ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಅವರು ಸಂಘದ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ಕಲಾವಿದರಿಗೆ ಸರಕಾರದ ಸೌಲಭ್ಯ ದೊರಕಿಸಿ ಕೊಡುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಮೋಹನ್ದಾಸ್ ಕೊಟ್ಟಾರಿ, ಪ್ರ.ಕಾರ್ಯದರ್ಶಿ ರಾಜೇಶ್ ಕಣ್ಣೂರು, ಹಿರಿಯ ಕಲಾವಿದ ತಿಮ್ಮಪ್ಪ ಕುಲಾಲ್, ಪ್ರಮುಖರಾದ ಚಿದಾನಂದ ಅದ್ಯಪಾಡಿ,ಬಾಲಕೃಷ್ಣ ಅಂಚನ್, ಮಂಜಪ್ಪ ಮೂಲ್ಯ, ತುರವೇ ಬಂಟ್ವಾಳ ತಾ. ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ, ಬೆಳ್ತಂಗಡಿ ತಾ. ಸಂಘಟನಾ ಕಾರ್ಯದರ್ಶಿಗಳಾದ ವಿ.ಎನ್.ಕುಲಾಲ್, ಸಚಿನ್ ಅತ್ತಾಜೆ ಮತ್ತಿತರರು ಉಪಸ್ಥಿತರಿದ್ದರು.
ಮೇಧಾವಿ ಮಡಂತ್ಯಾರು ಸ್ವಾಗತಿಸಿದರು. ಜಯರಾಜ ಅತ್ತಾಜೆ ವಂದಿಸಿದರು.





