Wednesday, October 25, 2023

ವಿಟ್ಲ: ಡಾ.ಪ್ರಭಾಕರ ಶಿಶಿಲರ 172ನೇ ಕೃತಿ ಬಿಡುಗಡೆ

Must read

ವಿಟ್ಲ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ಬಿ.ಕಾಂ ಪದವಿ ತರಗತಿಯ ಪಠ್ಯ ವಿಷಯಾಧರಿತ ಡಾ.ಪ್ರಭಾಕರ ಶಿಶಿಲರ ’ಹಣ ಮತ್ತು ಸಾರ್ವಜನಿಕ ಹಣಕಾಸು’ ಕೃತಿಯ ಬಿಡುಗಡೆ ಸಮಾರಂಭ ನೆರವೇರಿತು. ವಿವೇಕಾನಂದ ಕಾಲೇಜು ಪುತ್ತೂರು ಇದರ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಅರುಣ್ ಪ್ರಕಾಶ್ ಕೃತಿಯನ್ನು ಬಿಡುಗಡೆಗೊಳಿಸಿ, ಡಾ.ಪ್ರಭಾಕರ ಶಿಶಿಲರು ಸಾಹಿತ್ಯ ಮತ್ತು ಅರ್ಥಶಾಸ್ತ್ರ ಎರಡೂ ಪ್ರಾಕಾರಗಳಲ್ಲಿ ಆಧಾರ ಕೃತಿ ರಚಿಸುವ ಸವ್ಯಸಾಚಿ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ 172 ಕೃತಿಗಳನ್ನು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ 43 ಕೃತಿಗಳನ್ನು ತನ್ನ ಪ್ರಾಧ್ಯಾಪಕ ಮತ್ತು ಪ್ರಾಚಾರ್ಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ರಚಿಸಿರುವುದು ಶ್ಲಾಘನೀಯ ವಿಚಾರ. ವೃತ್ತಿ ಮತ್ತು ಪ್ರವೃತ್ತಿಗಳನ್ನು ಸಮತೋಲನವಾಗಿ ಸಾಗಿಸಿಕೊಂಡು ಹೋಗುವವರು ಬಹಳ ವಿರಳ. ಇದರಿಂದಾಗಿ ನಮ್ಮ ಜಿಲ್ಲೆಯ ಸಾಹಿತ್ಯ ಮತ್ತು ಅರ್ಥಶಾಸ್ತ್ರ ಕಥೆಗಳು ರಾಜ್ಯಾದ್ಯಂತ ಓದುವಂತಾಗಿದೆ. ಅರ್ಥಶಾಸ್ತ್ರವನ್ನು ಸ್ಥಳೀಯ ಉದಾಹರಣೆಗಳೊಂದಿಗೆ ಎಲ್ಲರಿಗೂ ಅರ್ಥವಾಗುವ ಹಾಗೆ ವಿವರಿಸಿರುವುದು ಇವರ ವಿಶಿಷ್ಟ ಗುಣ ಎಂದರು.
ಕೃತಿಕಾರ ಡಾ.ಪ್ರಭಾಕರ ಶಿಶಿಲ ಮಾತನಾಡಿ, ತನ್ನ ಕೃತಿ ರಚನೆಯ ಪ್ರೇರಣೆಗಳನ್ನು ನೆನಪಿಸಿಕೊಂಡರು. ಜಾಗತೀಕರಣದ ಇಂದಿನ ಯುಗದಲ್ಲೂ ಕನ್ನಡ ಮಾಧ್ಯಮ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಆದುದರಿಂದ ಈ ಮಾಧ್ಯಮದಲ್ಲಿ ಒಳ್ಳೆಯ ಅವಲೋಕನ ಕೃತಿಗಳು ಬರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಿನ್ಸಿಪಾಲ್ ಡಾ.ಶಂಕರ ಪಾಟಾಳಿ ವೈ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರು ಹಾಗೂ ನ್ಯಾಕ್ ಸಂಯೋಜಕರಾದ ಡಾ.ಶ್ರೀಜಾ. ಜೆ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಐ.ಕ್ಯೂ.ಎ.ಸಿ ಸಂಚಾಲಕ ಪರಮೇಶ್ವರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಚಕ್ರೇಶ್ವರಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತೀಕ ಸ್ವಾಗತಿಸಿದರು. ಸಂಧ್ಯಾ ವಂದಿಸಿದರು. ನಫೀಶಾ ಝಲ್ಫ ಡಾ.ಪ್ರಭಾಕರ ಶಿಶಿಲ ಅವರ ವ್ಯಕ್ತಿ ಪರಿಚಯ ಮಾಡಿದರು. ಗಣೇಶ. ಎಂ ಕಾರ್ಯಕ್ರಮ ನಿರೂಪಿಸಿದರು.

More articles

Latest article