


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ನಾಗಮಂಡಲೋತ್ಸವ ನಡೆಯಲಿದೆ. ಇದಕ್ಕಾಗಿ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಇದನ್ನು ಕಣ್ತುಂಬಿಕೊಳ್ಳುಲು 2 ಲಕ್ಷಕ್ಕೂ ಮಿಗಿಲಾದ ಭಕ್ತರು ಸೇರುವ ನಿರೀಕ್ಷೆ ಇದೆ. ಕಟೀಲಿನ ಮೂಲ ಸ್ಥಳವಾಗಿರುವ ಕುದ್ರುವಿನಲ್ಲಿ ಈಗಾಗಲೇ ನಾಗಮಂಡಲದ ಸ್ಥಳದಲ್ಲಿ ತಗಡು ಚಪ್ಪರ ಹಾಕಲಾಗಿದ್ದು, ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಕುದ್ರು ಮೂಲ ವನಕ್ಕೆ ಹೋಗಲು ಎರಡು ಸೇತುವೆಗಳು ಇವೆ. ನಾಗಮಂಡಲಕ್ಕೋಸ್ಕರ ನದಿಗೆ ಮಣ್ಣು ತುಂಬಿಸಿ ಹೊಸ ಸೇತುವೆ ನಿರ್ಮಿಸಲಾಗಿದೆ. ನಾಗಮಂಡಲದಲ್ಲಿ ಸ್ಥಳ ಕಿರಿದಾಗಿದ್ದು ನಾಗಮಂಡಲ ವೀಕ್ಷಣೆಗೆ ಬಸ್ ನಿಲ್ದಾಣ ದೇವಸ್ಥಾನ ರಥಬೀದಿ, ಭೋಜನ ಶಾಲೆ ವಿವಿಧ 10 ಕಡೆಗಳಲ್ಲಿ ಎಲ್ಸಿಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲು ಮಾಡಿದ್ದು ಎಲ್ಲ ಭಕ್ತರಿಗೂ ದೇವರ ದರ್ಶನ ಮಾಡಲು ಅವಕಾಶವಿದೆ. ಕಟೀಲು ದೇವಸ್ಥಾನ ಹಾಗೂ ವಿವಿಧ ಕಡೆಗಳಲ್ಲಿ ಪಾನಕದ ವ್ಯವಸ್ಥೆ ಮಾಡಲಾಗಿದೆ.
ಇಂದು ನಾಗಮಂಡಲೋತ್ಸವ ಪ್ರಯುಕ್ತವಾಗಿ ಕಟೀಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಮಂಗಳೂರು ಸಹಿತ ವಿವಿಧ ಭಾಗಗಳಿಂದ ನೇರವಾಗಿ ಕಟೀಲಿಗೆ ತೆರಳುವ ಸಿಟಿ-ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಲಾಗಿದೆ. ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 4ರ ವರೆಗೆ ಮಂಗಳೂರು, ಸುರತ್ಕಲ್, ಹಳೆಯಂಗಡಿ, ಬಿ.ಸಿ. ರೋಡ್, ಮೂಲ್ಕಿ, ಬೆಳ್ಮಣ್, ಕಾರ್ಕಳ ಸೇರಿದಂತೆ ಕೆಲವೊಂದು ಪ್ರದೇಶದಿಂದ ಒಟ್ಟು 100 ಬಸ್ಗಳು ಸರಾಸರಿ 5 ಟ್ರಿಪ್ ಗಳಂತೆ ಕಟೀಲಿಗೆ ಸಂಚರಿಸಲಿವೆ. ಬೆಳಗ್ಗಿನಿಂದ ರಾತ್ರಿ 11.30ರ ವರೆಗೆ ಕಟೀಲು ರೂಟಿನಲ್ಲಿ ಸಂಚರಿಸುವ ಬಸ್ಗಳು ಉಚಿತ ಬಸ್ ಸೇವೆ ನೀಡಲಾಗುವುದು ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ.







