ವಿಟ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲದ ವತಿಯಿಂದ ಶುಕ್ರವಾರ ’ಮಗಳನ್ನು ಉಳಿಸಿ, ಮಗಳನ್ನು ಓದಿಸಿ’ ಯೋಜನೆಯಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು.
ಜಾಥಾ ಕಾರ್ಯಕ್ರಮಕ್ಕೆ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಚಾಲನೆ ನೀಡಿದರು. ವಿಟ್ಲ ಜೈನ ಬಸದಿ ಬಳಿಯಿಂದ ಹೊರಟ ಜಾಥಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಬಳಿ ಸಂಪನ್ನಗೊಂಡಿತು.
ಬಳಿಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ ಅವರು ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಕೃಷ್ಣಪ್ಪ ಉದ್ಘಾಟಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಚಂದ್ರಕಾಂತಿ ಶೆಟ್ಟಿ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಆಳ್ವ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಹೆಚ್., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿಯವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಬಾಲನ್ಯಾಯ ಮಂಡಳಿ ಸದಸ್ಯ ಉಮೇಶ್ ನಿರ್ಮಲ್ ಭಾಗವಹಿಸಿ ಮಕ್ಕಳ ಮೇಲಿನ ದೌರ್ಜನ್ಯ ತಡೆ ಬಗ್ಗೆ, ಮಹಿಳೆಯರ ಮತ್ತು ಮಕ್ಕಳ ಮಾರಾಟ ಸಾಗಾಟ ತಡೆ ಕಾಯ್ದೆ ಬಗ್ಗೆ, ಬಾಲ್ಯವಿವಾಹ ತಡೆ ಕಾಯ್ದೆ ಬಗ್ಗೆ ಮಾಹಿತಿಯನ್ನು ನೀಡಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು, ಸ್ತ್ರೀಶಕ್ತಿ ಸದಸ್ಯರು, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ 10ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮಾಣಿಲ ಸರಕಾರಿ ಪ್ರೌಢಶಾಲೆಯ ಅನನ್ಯ ಬಿ. ಹಾಗೂ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ನಿಶ್ಮಿತ ಹಾಗೂ ಪ್ರತಿಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ನಡೆಸಿದ ಚಿತ್ರ ಸ್ಫರ್ಧೆ ಹಾಗೂ ಪ್ರಬಂಧ ಸ್ಫರ್ಧೆಗಳ ವಿಜೇತ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ರೇಣುಕಾ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here