ವಿಟ್ಲ: ಇತಿಹಾಸ ಪ್ರಸಿದ್ದ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾ ರಥೋತ್ಸವವು ಮಂಗಳವಾರ ಭಕ್ತಸಾಗರದ ಭಕ್ತಿಯ ಪರಾಕಾಷ್ಠೆಯ ಮಧ್ಯೆ ನಡೆಯಿತು. ರಾತ್ರಿ ಸಂಭ್ರಮ ಸಡಗರದಿಂದ ನಡೆಯಿತು. ರಾತ್ರಿ ಕಡಂಬುವಿನಿಂದ ದೇಗುಲಕ್ಕೆ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿದ ಬಳಿಕ ದೇವರ ಬಲಿ ಉತ್ಸವ ನಡೆಯಿತು.
ಬಳಿಕ ರಥದ ಗದ್ದೆಯಲ್ಲಿ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಸರ್ವಾಲಂಕೃತ ರಥದಲ್ಲಿ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಮಹಾರಥೋತ್ಸವ ‘ಇಟ್ಟೆಲಾಯನೊ’ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. ರಥೋತ್ಸವದದ ಬಳಿಕ ದೇವರ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಿತು.
ಬೆಳಗ್ಗೆ ಕ್ಷೇತ್ರದಲ್ಲಿ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಹಸ್ರಾರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ವಿಟ್ಲ ಮಾದರಿ ಶಾಲಾ ವಠಾರದಲ್ಲಿ ಪಟ್ಲ ಯಕ್ಷಾಭಿಮಾನಿಗಳ ಬಳಗ ವಿಟ್ಲ ಅರ್ಪಿಸುವ ಬಪ್ಪನಾಡು ಮೇಳದವರಿಂದ ‘ನಾಗನಂದಿನಿ’ ಯಕ್ಷಗಾನ ಬಯಲಾಟ ನಡೆಯಿತು.
ಹರಿದು ಬಂದ ಅಸಂಖ್ಯಾತ ಭಕ್ತ ಗಣ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಊರ ಪರವೂರಿನ ಸಾವಿರಾರು ಭಕ್ತಾಧಿಗಳು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಲಾರಂಭಿಸಿದರು. ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ತೆರಳುವ ಎಲ್ಲಾ ಒಳರಸ್ತೆಯಲ್ಲಿ ಬೆಳಗ್ಗಿನಿಂದಲೇ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಭಕ್ತಾಧಿಗಳು ತಮ್ಮ ವಾಹನವನ್ನು ದೇವಳದ ಹೊರಭಾಗದೆಲ್ಲಡೆ ನಿಲ್ಲಿಸಿ ನಡೆದುಕೊಂಡೇ ದೇವಸ್ಥಾನಕ್ಕೆ ತಲುಪ ಬೇಕಾಯಿತು.
ಪೊಲೀಸ್ ಬಂದೋಬಸ್ತು:
ವಿಟ್ಲ ರಥೋತ್ಸವದ ಪ್ರಯುಕ್ತ ನಾನಾ ಕಡೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದ್ದು, ದೇವಾಲಯದ ಜಾತ್ರಾ ಗದ್ದೆ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿ ನೇತೃತ್ವದಲ್ಲಿ ವಿಶೇಷ ಬಂದೋ ಬಸ್ತ್‍ನ್ನು ಏರ್ಪಡಿಸಲಾಗಿತ್ತು. ಮೊದಲೇ ಕೆಲವೆಡೆ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದ್ದರೂ ಜಾತ್ರಾ ಪ್ರಯುಕ್ತ ಕೆಲವೊಂದು ಆಯಕಟ್ಟಿನ ಸ್ಥಳದಲ್ಲಿ ಹೆಚ್ಚುವರಿಯಾಗಿ ಸಿ.ಸಿ ಕ್ಯಾಮರವನ್ನು ಅಳವಡಿಸಲಾಗಿತ್ತು. ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕಳ್ಳರ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here