



ಉಜಿರೆ: ವ್ಯಾವಹಾರಿಕ ಹಾಗೂ ವ್ಯಾಪಾರೀ ದೃಷ್ಟಿಕೋನ ಇದ್ದಾಗ ಮಾನವೀಯ ಸಂಬಂಧಗಳು ಕುಸಿದು ಹೊಗುತ್ತವೆ. ಮಾನವ ಧರ್ಮ ಹಾಗೂ ಪ್ರಕೃತಿಯನ್ನು ಪ್ರೀತಿಸುವ ಜೈನ ಧರ್ಮದ ತತ್ವ, ಸಿದ್ಧಾಂತಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಸತ್ಯ, ನ್ಯಾಯ, ನೀತಿ, ಧರ್ಮದ ಹಿನ್ನೆಲೆಯಲ್ಲಿ ಮಾನವೀಯ ಸಂಬಂಧಗಳನ್ನು ಭದ್ರಗೊಳಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಸಿ. ರಮೇಶ್ ಹೇಳಿದರು.
ಉಜಿರೆ ಎಸ್.ಡಿ.ಯಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಹಂಪಿ ಕನ್ನಡ ವಿ.ವಿ. ಪ್ರಸಾರಾಂಗ, ಬೆಳ್ತಂಗಡಿ ಜೈನ್ ಮಿಲನ್ ಘಟಕ, ಮಂಗಳೂರು ವಿ.ವಿ.ಅರ್ಥಶಾಸ್ತ್ರ ಸಂಘ ಮತ್ತು ಉಜಿರೆಯ ಹಾ.ಮಾ.ನಾ. ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಮಂಗಳವಾರ ಆಯೋಜಿಸಿದ ‘ಭಗವಾನ್ ಮಹಾವೀರರ ಆರ್ಥೀಕ ಚಿಂತನೆಗಳು-ಪ್ರಸ್ತುತತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ದೇಶಗಳಲ್ಲಿ ಆರ್ಥಿಕ ಚಿಂತನೆಗಳಲ್ಲಿ ವಾಣಿಜ್ಯ, ಸುಖ-ಭೋಗ ಹಾಗೂ ವಿಲಾಸಿ ಜೀವನಕ್ಕೆಆದ್ಯತೆ ನೀಡಿದರೆ ಭಾರತೀಯ ಆರ್ಥಿಕ ಚಿಂತನೆಯಲ್ಲಿ ಮಾನವೀಯ ಸಂಬಂಧ, ಸೇವೆ, ತ್ಯಾಗ ಹಾಗೂ ಶ್ರಮ ಸಿದ್ಧಾಂತಕ್ಕೆ ಆದ್ಯತೆ ನೀಡುತ್ತೇವೆ. ನಾವೆಲ್ಲರೂ ಶಾಂತಿ ಪ್ರಿಯರು. ಅಹಿಂಸೆ ಮತ್ತು ಶಾಂತಿ, ನೆಮ್ಮದಿಗೆ ಆದ್ಯತೆ ನೀಡುವ ಭಗವಾನ್ ಮಹಾವೀರರ ಆರ್ಥಿಕ ಚಿಂತನೆಗಳು ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲೇ ಪ್ರಥಮವಾಗಿ ಜೈನ ಸಿದ್ಧಾಂತದ ಬಗ್ಗೆ ಹಂಪಿ ಕನ್ನಡ ವಿ.ವಿಯಲ್ಲಿ ಆನ್ಲೈನ್ ಕೋರ್ಸ್ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಕುಲಪತಿಗಳು ಪ್ರಕಟಿಸಿದರು.
ಹಂಪಿ ಕನ್ನಡ ವಿವಿ ನೇತೃತ್ವದಲ್ಲಿ ಉಜಿರೆ ಎಸ್.ಡಿ.ಯಂ. ಕಾಲೇಜಿನಲ್ಲಿ ಸಂಶೋಧನಾತ್ಮಕ ಅಧ್ಯಯನದ ಬಗ್ಗೆ 5 ದಿನಗಳ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು ಎಂದು ಅವರು ಪ್ರಕಟಿಸಿದರು.
ವಡ್ಡಾರಾಧನೆ ಕೃತಿ ತನ್ನ ವ್ಯಕ್ತಿತ್ವ ರೂಪಿಸುವಲ್ಲಿ ಗಾಢ ಪ್ರಭಾವ ಬೀರಿದೆ ಎಂದು ಡಾ.ಎಸ್.ಸಿ. ರಮೇಶ್ ಹೇಳಿದರು.
‘ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ಧಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮಾತನಾಡಿ, ಭಗವಾನ್ ಆದಿನಾಥ ತೀರ್ಥಂಕರರು ಅಸಿ-ಮಸಿ-ಕೃಷಿ ವಿಧಾನವನ್ನು ಜನರಿಗೆ ಬೋಧಿಸಿ ಸ್ವಾವಲಂಬಿ ಜೀವನಕ್ಕೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಅರ್ಥಶಾಸ್ತ್ರದಲ್ಲಿ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಆಶೀರ್ವಚನ ನೀಡಿದ ಮೂಡಬಿದ್ರೆ ಜೈನ ಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮದ ನೆಲೆಯಲ್ಲಿ ಅರ್ಥ, ಕಾಮ ಮತ್ತು ಮೋಕ್ಷ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಸತ್ಯ, ನ್ಯಾಯ, ನೀತಿ ಹಾಗೂ ಧರ್ಮದ ನೆಲೆಯಲ್ಲಿ ಅರ್ಥ ಸಂಪಾದನೆ ಮಾಡಿದರೆ ಸುಖ-ಶಾಂತಿ-ನೆಮ್ಮದಿ ಸಿಗುತ್ತದೆ. ಪಂಚಾಣು ವ್ರತಗಳ ಪಾಲನೆಯೊಂದಿಗೆ ಪರಿಗ್ರಹಗಳನ್ನು ಪರಿಮಿತಿಗೊಳಿಸಿ ಲಾಭಗಳಿಸುವ ಭಾವನೆ ಹೊಂದದೆ ಸೇವಾ ಮನೋಭಾವದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಪ್ರಾಂಶುಪಾಲ ಪ್ರೊ.ಎಸ್. ಸತೀಶ್ಚಂದ್ರ, ಡಾ. ಜಿ.ವಿ. ಜೋಶಿ, ಡಾ. ಪ್ರಶಾಂತ್, ಡಾ. ಬಿಪಿನ್ ದೋಶಿ ಮತ್ತು ಸೋನಿಯಾ ವರ್ಮ ಉಪಸ್ಥಿತರಿದ್ದರು.
ಧರ್ಮಸ್ಥಳದ ಶಿಶಿರ್ ಇಂದ್ರ ಪಂಚ ನಮಸ್ಕಾರ ಮಂತ್ರ ಪಠಣದೊಂದಿಗೆ ಪ್ರಾರ್ಥನೆ ಮಾಡಿದರು. ಎಸ್.ಡಿ.ಯಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು.ಎಸ್.ಡಿ.ಯಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ. ಜಯಕುಮಾರ್ ಶೆಟ್ಟಿ ವಂದಿಸಿದರು. ಪ್ರೋ.ಸುವೀರ್ ಜೈನ್ ಮತ್ತು ಕುಮಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.






