ಬಿ.ಸಿ.ರೋಡ್ : ಒಂದು ಊರು ಅಭಿವೃದ್ಧಿಯಾಗಬೇಕಾದರೆ ಮೂಲಸೌಕರ್ಯಗಳಲ್ಲೊಂದಾದ ರಸ್ತೆ ಅತೀ ಅಗತ್ಯ. ರಸ್ತೆ ಬಂದರೆ ಅದರದ ಜೊತೆಗೆ ದಾರಿ ದೀಪ, ನೀರಿನ ವ್ಯವಸ್ಥೆಯೂ ಬಂದು ಆ ಊರು ಅಭಿವೃದ್ಧಿಯತ್ತ ಸಾಗುತ್ತದೆ. ಆದರೆ ಈ ಊರು ಮಾತ್ರ ಇನ್ನೂ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಈ ಊರಿನ ಜನತೆ ಕಳೆದ 4 ದಶಕಗಳಿಂದಲೂ ಅಜ್ಜಿಬೆಟ್ಟು-ದೈಪಲ ರಸ್ತೆಯ ಮಧ್ಯ ಭಾಗದಲ್ಲಿ ರೈಲ್ವೇ ಹಳಿಯ ಮೇಲ್ಭಾಗದಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು ಬೇಡಿಕೆ ಸಲ್ಲಿಸಿ ಬೇಸತ್ತು ಹೋಗಿದ್ದಾರೆ.

ಅಭಿವೃದ್ಧಿ ಕಾಣದ ಬಿ.ಮೂಡದ ಅರ್ದ ಗ್ರಾಮ: ಬಂಟ್ವಾಳ ಪುರಸಭೆಯ ಬಿ.ಮೂಡ ಗ್ರಾಮ ಮಂಗಳೂರು- ಬೆಂಗಳೂರು ರೈಲು ದಾರಿ ಹೋಗುವುದರಿಂದ ಬಿ.ಮೂಡ ಗ್ರಾಮವು ಎರಡು ಭಾಗವಾಗಿ ಮಾರ್ಪಾಡಾಗಿದೆ. ರೈಲು ದಾರಿಯು ಬಿ.ಮೂಡ ಗ್ರಾಮದ ಅರ್ದ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು ನಿರಂತರ ವಾಹನ ಸಂಚಾರ ಇರುವ ಅಜ್ಜಿಬೆಟ್ಟು, ಸಂಚಯಗಿರಿ, ಕೈಕುಂಜೆ, ಕೊಡಂಗೆ ಪ್ರದೇಶಗಳು ಸಂಪೂರ್ಣ ಅಭಿವೃದ್ಧಿಯ ಕಡೆ ಮುಖಮಾಡಿದೆ. ಅದೇ ರೈಲ್ವೇ ದಾರಿಯ ಮತ್ತೊಂದು ಬದಿಯಲ್ಲಿರುವ ಊರುಗಳಾದ ದೈಪಲ, ಕಾಮಾಜೆ, ಮೈರಾನ್‌ಪಾದೆ, ಕುಲಾಲ ಮಠ ಈ ಮಾರ್ಗಕ್ಕೆ ಬಿ.ಸಿ.ರೋಡು ನಗರದಿಂದ ನೇರವಾದ ರಸ್ತೆ ಸಂಪರ್ಕ ಇಲ್ಲದೆ ಯಾವುದೇ ಅಭಿವೃದ್ಧಿಯನ್ನು ಕಾಣದಾಗಿ ಹೋಗಿದೆ. ಇಲ್ಲಿ ಅಂದಾಜು ಐನ್ನೂರಕ್ಕೂ ಜಾಸ್ತಿ ಮನೆಗಳಿದ್ದು ನಗರದಿಂದ ನೇರ ರಸ್ತೆ ಇಲ್ಲದೆ ಸುತ್ತು ಬಳಸಿ ಇಲ್ಲವೇ ಕಾಲು ನಡಿಗೆಯಲ್ಲೇ ತಮ್ಮ ಮನೆಗಳಿಗೆ ತೆರಳುತ್ತಾರೆ.

ವಿದ್ಯಾರ್ಥಿಗಳ ನಿತ್ಯ ಪರದಾಟ: ಈ ಪ್ರದೇಶ ಅಭಿವದ್ಧಿಯಾಗಲೆಂದು ಕಾಮಾಜೆಯಲ್ಲೊಂದು ಸರಕಾರಿ ಪದವಿ ಕಾಲೇಜೊಂದು ನಿರ್ಮಾಣವಾಗಿದೆ. ಆದರೆ ಸರಕಾರಿ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ರಸ್ತೆ ದಾರಿಯಲ್ಲಿ ಸುಮಾರು ಎಂಟು ಕಿಲೋ ಮೀಟರ್ ನಡೆಯಬೇಕು. ಬಿ.ಸಿ.ರೋಡು ನಗರದಿಂದ ಕಾಲು ದಾರಿಯಲ್ಲಿ ಕಾಲೇಜಿಗೆ ಕೇವಲ ಎರಡು ಕಿಲೋ ಮೀಟರ್. ಈ ಕಾಲು ದಾರಿಯು ರಸ್ತೆಯಾಗದೇ ಬಾಕಿಯಾಗಿರುವುದೇ ರೈಲ್ವೇ ಮೇಲ್ಸೇತುವೆ ಇಲ್ಲದೆ. ಈ ಪ್ರದೇಶದಲ್ಲಿ ರೈಲ್ವೇ ಮೇಲ್ಸೇತುವೆ ಇದ್ದಿದ್ದರೆ ಹಲವು ಪ್ರಯೋಜಗಳಿವೆ. ಸರಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಅಲ್ಲದೆ ಎಷ್ಟೋ ಬಡ ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಬಿ.ಸಿ.ರೋಡು ನಗರ ಪ್ರದೇಶದ ವಾಹನ ದಟ್ಟಣೆಯನ್ನು ತಪ್ಪಿಸಲು ಕಾಮಾಜೆ ರಸ್ತೆಯ ಮುಖಾಂತರ ಬಂಟ್ವಾಳ- ಧರ್ಮಸ್ಥಳ, ಮೂಡಬಿದಿರೆಗೆ ತೆರಳಬಹುದು. ಮತ್ತೊಂದೆಡೆ ಮೊಡಂಕಾಪು ರಸ್ತೆಯಾಗಿ ಪೊಳಲಿ, ಬಜಪೆ ಸಂಪರ್ಕ ಮಾಡಬಹುದು.

ಮೇಲ್ಸೇತುವೆಗಾಗಿ ಸಂಘಟನೆ: ಹಳ್ಳಿ ಪ್ರದೇಶವಾದುದರಿಂದ ಈ ಪ್ರದೇಶದಲ್ಲಿ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರೇ ಹೆಚ್ಚು. ತಮ್ಮ ದೈನಂದಿನ ಜೀವನಕ್ಕಾಗಿ ದಿನ ಕೆಲಸ ಮಾಡಿ ಎಲ್ಲರೂ ಒಂದೇ ಮನಸ್ಸಿನಿಂದ ಸಂಘಟನೆಯನ್ನು ಕಟ್ಟಿ ಮೇಲ್ಸೇತುವೆಗಾಗಿ ಹೋರಾಟ ಮಾಡುತ್ತಿದ್ದಾರೆ. ತಮ್ಮ ದುಡಿಮೆಯ ದುಡ್ಡಿನಲ್ಲಿ ಒಂದಷ್ಟು ಹಣವನ್ನು ಈ ಹೋರಾಟಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಕಳೆದ 40 ವರ್ಷಗಳಿಂದ ಆಯ್ಕೆಯಾದ ಎಲ್ಲಾ ಸಂಸದರಿಗೆ ಸತತವಾಗಿ ಮನವಿಯನ್ನು ಸಲ್ಲಿಸುತ್ತಿದ್ದಾರೆ. ಜೊತೆಗೆ ನೂತನ ತಂತ್ರಜ್ಙಾನವಾದ ಡ್ರೋನ್ ಕ್ಯಾಮರಾದಿಂದಲೂ ಇಲ್ಲಿನ ವಸ್ತುಸ್ಥಿತಿಯನ್ನು ತಿಳಿಸಲು ವೀಡಿಯೋ ಮಾಡಿ ಕೇಂದ್ರ ಸರಕಾರಕ್ಕೆ ಕೂಡ ಕಳುಹಿಸಿದ್ದಾರೆ. ಆದರೆ ಅವರ ಹೋರಾಟಕ್ಕೆ ಇದುವರೆಗೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಸಂಬಂಧಪಟ್ಟ ಇಲಾಖೆ ಯಾವಾಗ ಇವರ ಮನವಿಯನ್ನು ಅರ್ಥೈಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here