ವಿಟ್ಲ: ಅನಂತಾಡಿ ಗ್ರಾಮದ ಬಾಕಿಲಗುತ್ತುವಿನಲ್ಲಿರುವ ಅನಂತಾಡಿ ಮೂಲಸ್ಥಾನ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ, ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಜನವರಿ 27ರಿಂದ ಫೆಬ್ರವರಿ 5ರವರೆಗೆ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಶ್ರೀ ದೈವಗಳ ನೇಮೋತ್ಸವ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬಾಕಿಲಗುತ್ತು ತಿಳಿಸಿದ್ದಾರೆ.
ವಿಟ್ಲದ ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಬೆಳಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.26 ರಂದು ಅಪರಾಹ್ನ 3 ಗಂಟೆಯಿಂದ ಮಾಣಿ ಬಿಲ್ಲವ ಸಮುದಾಯ ಭವನದಿಂದ ಬಾಕಿಲದವರೆಗೆ ನಡೆಯಲಿರುವ ಹೊರೆಕಾಣಿಗೆ ಮೆರವಣಿಗೆಯೊಂದಿಗೆ ಪ್ರತಿಷ್ಠಾ ಕಲಶಾಭಿಷೇಕದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಲಿದೆ ಎಂದರು. ಜ.27 ರಿಂದ 31 ರವರೆಗೆ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಶತ ಚಂಡಿಕಯಾಗ ನಡೆದರೆ ಫೆ.1 ರಿಂದ 5 ತನಕ ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ, 29ರಂದು ಬೆಳಗ್ಗೆ ಅಷ್ಟೋತ್ತರ ಶತನಾರಿಕೇಳ ಗಣಪತಿ ಹವನ ನಡೆಯಲಿದ್ದು, ಸಂಜೆ ನಡೆಯಲಿರುವ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ತುಳು ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡುವರು.
ಜ.30 ರಂದು ನಾಗದೇವರ ಸಹಿತ ಎಲ್ಲಾ ಸಾನಿಧ್ಯಗಳ ಪ್ರತಿಷ್ಠಾ ವಿಧಿವಿಧಾನಗಳು ನಡೆಯಲಿದೆ. ಮಧ್ಯಾಹ್ನ ಬೈದೇರುಗಳ ದರ್ಶನ ನಡೆದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಿತ್ತರಂಜನ್ ಅಧ್ಯಕ್ಷತೆ ವಹಿಸುವರು. ಕುತ್ಯಾರು ಕೇಂಜಮಲೆ ಗರಡಿಯ ಬಿಲ್ಲವ ಶ್ರೇಷ್ಠ ಬಗ್ಗ ಪೂಜಾರಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದು, ಯುವ ಅಧ್ಯಯನಕಾರ ಸಂಕೇತ್ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡುವರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಕ್ಷೇತ್ರ ಸಂಚಿಕೆ ಬಿಡುಗಡೆಗೊಳಿಸುವರು. ಜ.31ರಂದು ಮುಂಜಾನೆ 7 ರಿಂದ ಶತಚಂಡಿಕಾಯಾಗ ಹಾಗೂ ಅಪರಾಹ್ನ ಕಲಶಾಭಿಷೇಕ ನಡೆಯಲಿದ್ದು, ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡುವರು. ಬಾಕಿಲಗುತ್ತು ಆಡಳಿತ ಟ್ರಸ್ಟ್‍ನ ಅಧ್ಯಕ್ಷ ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಲಿದ್ದಾರೆ. ಮೆಸ್ಕಾಂ ಮುಖ್ಯ ಅಭಿಯಂತರ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.
ಫೆ.1 ರಂದು ರಾತ್ರಿ ಹೊಸಮ್ಮ ದೈವದ ನೇಮ, ಫೆ.2 ರಂದು ರಾತ್ರಿ ಅಣ್ಣಪ್ಪ ಪಂಜುರ್ಲಿ ಕುಂಟಲ್ದಾಯ ನೇಮ, ಫೆ.3 ರಂದು ರಾತ್ರಿ ವೈದ್ಯನಾಥ ನೇಮ ಹಾಗೂ ಫೆ.4 ರಂದು ರಾತ್ರಿ ಬೈದೇರುಗಳು ಗರಡಿ ಇಳಿಯಲಿದೆ ಹಾಗೂ ಫೆ.5ರಂದು ಬೆಳಗ್ಗೆ ಕೊರಗಜ್ಜ ದೈವದ ಕೋಲ ನಡೆದು, ಸಂಜೆ 7ರಿಂದ ಕುರ್ಸಂಬಿಲ ನಡೆಯಲಿದೆ ಎಂದವರು ವಿವರಿಸಿದರು.
ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮಾತನಾಡಿ, ಸುಮಾರು 2.5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ನಡೆದಿದ್ದು, ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಕಲಶಾಭಿಷೇಕದ ಅಂಗವಾಗಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಫೆ.4 ರವರೆಗೆ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ತಿಳಿಸಿದರು. ನಾನಾ ಸಮಿತಿಗಳ ಮೂಲಕ ಸಿದ್ಧತಾ ಕಾರ್ಯ ಭರದಿಂದ ನಡೆದಿದ್ದು, ಆಸುಪಾಸಿನ ಗ್ರಾಮಗಳ ಅನೇಕ ಭಕ್ತಾದಿಗಳು ಶ್ರಮದಾನದ ಮೂಲಕವೂ ತೊಡಗಿಸಿ ಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಹರೀಶ್ ಸಾಲ್ಯಾನ್ ಮಂಗಳೂರು, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಪೂಜಾರಿ ಬಾಕಿಲಗುತ್ತು, ಗೌರವಾಧ್ಯಕ್ಷ ಜನಾರ್ದನ ಪೂಜಾರಿ ಬಾಕಿಲಗುತ್ತು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here