ಪುಂಜಾಲಕಟ್ಟೆ: ನೆಹರು ಯುವ ಕೇಂದ್ರ ಮಂಗಳೂರು, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ವನಿತಾ ಸಮಿತಿ, ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜು ಬಿ.ವೈ.ಆರ್.ಎಸ್. ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ೧೫೭ನೇ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ನೆರೆಹೊರೆ ಯುವ ಸಂಸತ್ತು ಹಾಗೂ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಜ.೧೨ ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಂಗಣದಲ್ಲಿ ಜರಗಿತು.
ಮಡಂತ್ಯಾರು ನ್ಯಾಯವಾದಿ ಉಷಾ ಬಾಳಿಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಮೂಡಿಗೆರೆ ಗ್ರಾಮೀಣ ಬ್ಯಾಂಕ್‌ನ ಪ್ರಬಂಧಕ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನೆಹರು ಯುವ ಕೇಂದ್ರ ಇದರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಎಸ್. ಅವರು ಸ್ವಾಮಿ ವಿವೇಕಾನಂದರ ೧೫೭ನೇ ಜನ್ಮ ದಿನದ ಮಹತ್ವ ಹಾಗೂ ಯುವ ಪೀಳಿಗೆ ಬಗ್ಗೆ ಮಾತನಾಡಿದರು. ನಿವೃತ್ತ ಉಪನ್ಯಾಸಕ ಪ್ರೊ. ರಾಜಮಣಿ ರಾಮಕುಂಜ ಅವರು ಮಾತನಾಡಿ, ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳು ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಮಾಹಿತಿ ನೀಡಿದರು. ಜಲಸಂರಕ್ಷಣೆಯ ಮೇಲೆ ಯುವ ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿವರಿಸಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಆವರು ಯುವಜನತೆ ಸಮಾಜದ ಅಭಿವೃದ್ಧಿಯ ರೂವಾರಿಗಳು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಿ.ರಾಮಚಂದ್ರ ರಾವ್ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿಯನ್ನು ಮಾಹಿತಿ ನೀಡಿದರು. ಬೆಳ್ತಂಗಡಿ ನ್ಯಾಯವಾದಿ ಉದಯ ಬಿ.ಕೆ. ಅವರು ಮಾತನಾಡಿ, ನಾವು ಮೊದಲು ಮನೆಯನ್ನು ಸ್ವಚ್ಛವಿರಿಸಬೇಕು. ಅದರೊಂದಿಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು ಎಂದು ಸ್ವಚ್ಛ ಭಾರತದ ಕುರಿತಾಗಿ ಹೇಳಿ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಕುರಿತಾಗಿ ಮಾಹಿತಿ ನೀಡಿದರು.
ಪುಂಜಾಲಕಟ್ಟೆ ಆರಕ್ಷಕ ಠಾಣೆ ಉಪನಿರೀಕ್ಷಕಿ ಸೌಮ್ಯಾಜೆ. ಅವರು, ಯುವಕರು ಸಾಮಾಜಿಕ ಜಾಲತಾಣವನ್ನು ಅತೀ ಹೆಚ್ಚಾಗಿ ಬಳಸುವುದರಿಂದ ಆಗುವ ಅಪಾಯದ ಬಗ್ಗೆ ಹೇಳಿದರು.
ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನ ನಿರ್ವಹಣ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಿತ್ರಾಪಡಿಯಾರ್ ಅವರು ಯುವ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಯುವಕರು ಉತ್ತಮ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ನೆಹರು ಯುವ ಕೇಂದ್ರ ಮಂಗಳೂರಿನ ಬೆಳ್ತಂಗಡಿ ತಾಲೂಕು ಸಂಯೋಜಕ ತಿಕ್ಷಿತ್, ಪಿಲಾತಬೆಟ್ಟು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ್ ಮತ್ತಿತರರು ಉಪಸ್ಥಿತರಿದ್ದರು.
ವೇಣೂರು ವಿದ್ಯೋದಯ ಪ್ರೌಢ ಶಾಲೆಯ ಯೋಗ ಶಿಕ್ಷಕ ರತ್ನಾಕರ್ ವೇಣೂರು ಅವರು ಯೋಗ ಕಾರ್ಯಾಗಾರ ನಡೆಸಿ, ವಿದ್ಯಾರ್ಥಿಗಳಿಗೆ ವ್ಯಾಯಾಮಗಳನ್ನು ಮಾಡಿಸಿ ಯೋಗ ಮತ್ತು ಅದರ ಪ್ರಯೋಜನಗಳ ಬಗ್ಗೆ ಹೇಳಿದರು.
ಮಿತ್ರ ಮಂಡಳಿಯ ಸಲಹೆಗಾರ ರಾಜೇಂದ್ರ ಕೆ.ವಿ. ಸ್ವಾಗತಿಸಿದರು. ಮಂಗಳೂರು ನೆಹರು ಯುವ ಕೇಂದ್ರ ದ ಸಾಂಕಪ್ಪ ಕಲ್ಮಂಜ ವಂದಿಸಿದರು. ಸ.ಪ್ರ.ದ. ಕಾಲೇಜು ವಿದ್ಯಾರ್ಥಿನಿ ರಜೀನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here