ಬಂಟ್ವಾಳ: ಪೋಷಕರು ನಿಷ್ಕಲ್ಮಶವಾದ ಮಕ್ಕಳ ಮನಸ್ಸನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಿ ಸೃಜನಶೀಲತೆಯನ್ನು ವೃದ್ಧಿಸಬೇಕು.ಆದರಿಂದ ಮಕ್ಕಳ ಪ್ರತಿಭೆ ವಿಕಸನಗೊಳ್ಳುವುದು ಎಂದು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್, ತುಳುಕೂಟ ಅಧ್ಯಕ್ಷ ಸುದರ್ಶನ್ ಜೈನ್ ಅವರು ಹೇಳಿದರು.
ಅವರು ಬಂಟ್ವಾಳ ತಾ| ಕೊಯಿಲ ಅಣ್ಣಳಿಕೆ ಫ್ರೆಂಡ್ಸ್ ಬಳಗ ಇದರ ಆಶ್ರಯದಲ್ಲಿ ಲೊರೆಟ್ಟೊಹಿಲ್ ರೋಟರಿಕ್ಲಬ್ ಸಹಯೋಗದಲ್ಲಿ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಕಲಾವೇದಿಕೆಯಲ್ಲಿ ಜರಗಿದ 13ನೇ ವರ್ಷದ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘ ಸಂಸ್ಥೆಗಳು ಕಲೆಯನ್ನು ಪೋಷಿಸುವ ಕಾರ್ಯ ಮಾಡಿದಾಗ ಸಾಮಾಜಿಕ ಸಾಮರಸ್ಯದ ಮಾನವ ಪ್ರೇಮ ಅರಳುತ್ತದೆ. ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಫ್ರೆಂಡ್ಸ್ ಅಣ್ಣಳಿಕೆ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಬಿ.ಸಿ.ರೋಡ್ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಹುದುಗಿರುತ್ತದೆ. ಅದಕ್ಕೆ ಪೂರಕ ವಾತಾವರಣ ದೊರಕಿದಾಗ ಪ್ರತಿಭೆ ವಿಕಸನವಾಗುತ್ತದೆ. ಮಕ್ಕಳಿಗೆ ಓದುವಿಕೆಯನ್ನೇ ಗುರಿಯಾಗಿಸದೆ ಕಲೆ, ಸಾಹಿತ್ಯದ ಜತೆ ಉತ್ತಮ ಸಂಸ್ಕಾರ ನೀಡುವುದು ಹಿರಿಯರ ಕರ್ತವ್ಯ ಎಂದು ಹೇಳಿದರು.
ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿಕ್ಲಬ್ ಕಾರ್ಯದರ್ಶಿ ಶ್ರುತಿ ಮಾಡ್ತಾ ಅವರು ಮಾತನಾಡಿ, ಕಲೆಗೆ ಅಗಾಧವಾದ ಶಕ್ತಿ ಇದ್ದು ಕಲೋಪಾಸನೆ, ಕಲಾ ಪ್ರೋತ್ಸಾಹ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್ ಮಾವಂತೂರು, ಕುಟ್ಟಿಕಳ ಕರ್ಪೆ ಸ.ಕಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರುಡಾಲ್ ದೇವಾನಂದ. ಸಾಮಾಜಿಕ ಕಾರ್ಯಕರ್ತ ಜಗದೀಶ ಭಂಡಾರಿ ಶುಭಹಾರೈಸಿದರು. ಫ್ರೆಂಡ್ಸ್ ಬಳಗದ ಶಶಿಧರ ಆಚಾರ್ಯ, ರಾಧಾಕೃಷ್ಣ ಆಚಾರ್ಯ,ರಾಜ್ ಕುಮಾರ್ ಶೆಟ್ಟಿಗಾರ್, ಸುಮಿತ್ರಾ ಆರ್. ಶೆಟ್ಟಿಗಾರ್, ಸುರೇಶ್‌ಅಣ್ಣಳಿಕೆ, ಸುಜಾತಾ, ಅಂಕಿತಾ, ಆಕಾಶ್ ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಉದಯೋನ್ಮುಖ ಯಕ್ಷಗಾನ ಭಾಗವತ ಧನಂಜಯ ಕೊಲ, ಗ್ರಾ.ಪಂ.ಸದಸ್ಯೆ ಕುಸುಮಾ ಅವರನ್ನು ಸಮ್ಮಾನಿಸಲಾಯಿತು. ಕೊಯಿಲ ಹಿ.ಪ್ರಾ.ಶಾಲೆಯ 5ರಿಂದ 7ನೇ ತರಗತಿ ಮತ್ತು ಪ್ರೌಢಶಾಲಾ 10ನೇ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪರಿಸರದಲ್ಲಿ ಸಾಂಪ್ರಾದಾಯಿಕ ಉಳುಮೆ ಮೂಕಲ ಕೃಷಿ ಮಾಡುವ ಇಬ್ಬರು ಕೃಷಿಕರಿಗೆ ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ನೀಡಲಾಯಿತು.


ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿದರು. ಫ್ರೆಂಡ್ಸ್ ಬಳಗ ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಅವರು ಪ್ರಸ್ತಾವಿಸಿದರು. ಚಂದ್ರಹಾಸ ಅಣ್ಣಳಿಕೆ ವಂದಿಸಿದರು. ನಾಟಕ ಕಲಾವಿದ ಪುರುಷೋತ್ತಮ ಕೊಲ ಮತ್ತು ವಿನುತಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪರಿಸರದ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವಿದ್ಯಾರ್ಥಿಗಳು, ಸ್ಥಳೀಯರು ಸಾಂಸ್ಕೃತಿಕ, ಮನೋರಂಜನ ಕಾರ್ಯಕ್ರಮ ಪ್ರದರ್ಶಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here