


ಬಂಟ್ವಾಳ: “ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಸಂವಿಧಾನ ವಿರೋಧಿ ಕಾಯ್ದೆ ಎಂಬ ಅರಿವು ನಮಗಿದೆ. ಇದರ ಪರ ಜಾಗೃತಿಯ ಅವಶ್ಯಕತೆಯು ನಮಗಿಲ್ಲ. ಇಲ್ಲಿಗೆ ಬರಬೇಕಾಗಿಲ್ಲ” ಎನ್ನುವ ಸ್ಟಿಕ್ಕರ್ಗಳನ್ನು ಬಂಟ್ವಾಳದ ಹಲವು ಮನೆಗಳ ಮುಂದೆ ಅಂಟಿಸಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ಸಿಗೆ ಭಾರೀ ಪ್ರತಿರೋಧ ವ್ಯಕ್ತಪಡಿಸಿವೆ.
ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ವಿವಾದಾತ್ಮಕ ಕಾಯ್ದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು, ಧರಣಿ, ಮುಂದುವರೆದಂತೆ, ಬಿಜೆಪಿಯು ಜನರ ಬೆಂಬಲವನ್ನು ಪಡೆಯಲು ವಿವಿಧ ಕ್ರಮಗಳನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿಯ ಪರವಾಗಿ ಬಂಟ್ವಾಳದ ಕೆಳಗಿನ ಪೇಟೆಯಲ್ಲಿ ಮನೆ ಮನೆ ಪ್ರಚಾರವು ಆರಂಭವಾಗಿದೆ. ಆದರೆ, ಬಂಟ್ವಾಳ ತಾಲೂಕಿನ ತಲಪಾಡಿ ಅಲ್ರಹ್ಮಾ ಫೌಂಡೇಶನ್ ವತಿಯಿಂದ ತಲಪಾಡಿ ಸುತ್ತಮುತ್ತಲ ಪ್ರದೇಶದ ಮನೆಗಳಲ್ಲಿ ಎನ್ಆರ್ಸಿ, ಸಿಎಎ, ಎನ್ಪಿಆರ್ ವಿರೋಧಿಸುವ ಪೋಸ್ಟರ್ಗಳನ್ನು ಅಂಟಿಸಲಾಗಿದ್ದು, ಸಂವಿಧಾನ ವಿರೋಧಿ ಕಾಯ್ದೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿವೆ.
ಮನೆ, ಮಸೀದಿಗಳಲ್ಲಿ ಸ್ಟಿಕರ್:
ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ವಿವಾದಾತ್ಮಕ ಕಾಯ್ದೆಯ ವಿರುದ್ಧ ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಕೆಲವು ಹಳ್ಳಿಗಳಲ್ಲಿ ಹೋರಾಟದ ಕೂಗು ಕೇಳಿ ಬರುತ್ತಿವೆ. ಸುಪ್ರೀಂಕೋರ್ಟ್ಗೆ ಪೋಸ್ಟ್ ಕಾರ್ಡ್ ಚಳವಳಿಯೂ ಆರಂಭವಾಗಿದೆ. ಹೋರಾಟದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಮನೆಗಳ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ತಲಪಾಡಿಯಲ್ಲಿ ಚಾಲನೆ ನೀಡಲಾಗಿದ್ದು, ಜನರು ಇದನ್ನು ಸ್ವೀಕರಿ ತಮ್ಮ ಮನೆಯ ಗೋಡೆಯ ಮೇಲೆ ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಪ್ರತೀ ಮಸೀದಿಗಳ ವಠಾರದಲ್ಲಿ ಸಿಎಎ ವಿರುದ್ಧ ಬೋರ್ಡ್ ಅಳವಡಿಸುವ ಚಿಂತನೆಗಳು ನಡೆಯುತ್ತಿವೆ.





