Sunday, October 22, 2023

’ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗಳಿಂದ ಯೋಜನೆ ಲಕ್ಷಾಂತರ ಕುಟುಂಬಗಳನ್ನು ಬೆಳಗಿದೆ’- ಕಣಿಯೂರುಶ್ರೀ

Must read

ವಿಟ್ಲ: ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಕುಟುಂಬಗಳನ್ನು ಬೆಳಗಿಸಿದೆ. ಆಡಳಿತ ಸರಕಾರಕ್ಕೂ ಅಸಾಧ್ಯವಾದ ನೂರಾರು ಜನಜೀವನ ಪೂರಕವಾದ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಳ್ಳಿಹಳ್ಳಿಗಳಲ್ಲಿ ಪಸರಿಸಿದೆ. ಧಾರ್ಮಿಕತೆ, ಜ್ಞಾನ, ಶಿಕ್ಷಣ, ಸಂಸ್ಕಾರಗಳ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ ಎಂದು ಕನ್ಯಾನ ಕಣಿಯೂರು ಶ್ರೀಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ನುಡಿದರು.
ಅವರು ಕನ್ಯಾನ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕನ್ಯಾನ ಒಕ್ಕೂಟ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜನ ಸಂಘಟನೆ, ಶಿಸ್ತು,ಬದ್ಧತೆ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ಯೋಜನೆ ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ 1982 ರಲ್ಲಿ ಪೂಜ್ಯ ಖಾವಂದರ ದೂರದೃಷ್ಟಿಯ ಚಿಂತನೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡ ಯೋಜನೆ ರಾಜ್ಯದ 30 ಜಿಲ್ಲೆಗಳಿಗೆ ವಿಸ್ತರಣೆಗೊಂಡಿದೆ. ಸಮಾಜದ ಸರ್ವಧರ್ಮದವರ ಬಾಳಿಗೆ ಆಶಾಕಿರಣವಾಗಿದ್ದು, ಪ್ರತಿಯೊಂದು ಮೂಲ ಸೌಕರ್ಯಗಳಿಗೆ ಕೊರತೆಯಾಗದಂತೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಈ ವರ್ಷ ಸುಜ್ಞಾನ ನಿಧಿಯಡಿಯಲ್ಲಿ 275 ಫಲಾನುಭವಿಗಳಿಗೆ ತಲಾ 1000 ರೂ. ನಂತೆ ಸಹಾಯನಧನ ವಿತರಿಸಲಾಗಿದೆ. ನಿರ್ಗತಿಕರ ಮಾಸಾಶನದಡಿಯಲ್ಲಿ ೪೮೪ ಫಲಾನುಭವಿಗಳಿಗೆ 750-1000 ರೂ. ಹಂಚಲಾಗಿದೆ ಎಂದು ತಿಳಿಸಿದರು.
ಕನ್ಯಾನ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಅಣ್ಣು ನಾಯ್ಕ ಕೊಣಲೆ ಅಧ್ಯಕ್ಷತೆ ವಹಿಸಿದ್ದರು. ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಎಸ್. ಈಶ್ವರ ಭಟ್, ನಿವೃತ್ತ ಅಧ್ಯಾಪಕ ಎಸ್.ಬಿ.ಕಣಿಯೂರು, ಬನಾರಿ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಕೇಪು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷ ಜಯಾನಂದ ಕಣಿಯೂರು ಭಾಗವಹಿಸಿದ್ದರು.
ಯೋಜನೆಯ ಕೇಪು ವಲಯದ ಮೇಲ್ವಿಚಾರಕಿ ವಿನೋದ ಸ್ವಾಗತಿಸಿದರು. ಕನ್ಯಾನ ’ಎ’ ಒಕ್ಕೂಟದ ಸೇವಾಪ್ರತಿನಿಧಿ ಚಂದ್ರಾವತಿ ವರದಿ ವಾಚಿಸಿದರು. ಶಿರಂಕಲ್ಲು ಒಕ್ಕೂಟದ ಸೇವಾಪ್ರತಿನಿಧಿ ಮೋಹಿನಿ ವಂದಿಸಿದರು. ಶಿಕ್ಷಕಿ ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ವೇ.ಮೂ. ಸಂಪ್ರೀತ್ ಭಟ್ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು.

More articles

Latest article