

ಬಂಟ್ವಾಳ: ಸ್ವಚ್ಛತೆಗೆ ಆದ್ಯತೆ ಇದು ನಮ್ಮ ಬಂಟ್ವಾಳ ಪುರಸಭೆಯ ಕಳೆದ ಕೆಲ ವರ್ಷಗಳ ಥೀಮ್…..
ಹಾಗಾದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆಯೆ? ಎಂಬುದರ ಕುರಿತು ಕಣ್ಣು ಹಾಯಿಸಿದರೆ, ಅಬ್ಬಾಬ್ಬಾ ಇದೇನಾ ಬಂಟ್ವಾಳ? ಅನ್ನುವ ಪದವನ್ನು ಉಪಯೋಗಿಸುವ ಜನರೇ ಹೆಚ್ಚು. ಯಾಕೆಂದರೆ ಎಲ್ಲಿ ನೋಡಿದರೂ ಕಸದ ರಾಶಿ. ಕಸ ಗುಡಿಸುವವರು ಇದ್ದಾರೆ, ಕಸ ವಿಲೇವಾರಿ ಮಾಡುವ ಕೆಲಸಗಾರರು ಇದ್ದಾರೆ ಹಾಗೇಯೇ ಕಸ ಸಿಕ್ಕ ಸಿಕ್ಕಲ್ಲಿ ಬಿಸಾಡುವವರು ಇದ್ದಾರೆ.
ಬಸ್ ನಿಲ್ದಾಣದಲ್ಲಿರುವ ಪುರಸಭೆಗೆ ಸೇರಿದ ವಾಣಿಜ್ಯ ಸಂಕೀರ್ಣದ ಮೆಟ್ಟಿಲು ಹತ್ತಿ ಹೋಗುವ ದಾರಿಯಲ್ಲಿ ಹಾಕಲಾದ ಕಸದ ರಾಶಿಗಳು. ಸ್ವಚ್ಛತೆ ಇಲ್ಲದೆ ಕೊಳೆತು ನಾರುತ್ತಿರುವ ಈ ವಾಣಿಜ್ಯ ಸಂಕೀರ್ಣದಲ್ಲಿ ಮಲೇರಿಯಾ ರೋಗದ ಭೀತಿಯಲ್ಲಿದ್ದಾರೆ.
ಬಸ್ ನಿಲ್ದಾಣದ ಬಳಿಯಲ್ಲಿ ಕೂಡಾ ಕಸ ಬಿಸಾಡುತ್ತಿದ್ದು, ಪ್ರತಿದಿನ ಕಸ ವಿಲೇವಾರಿ ಅಗಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹ.
ಪಾಣೆಮಂಗಳೂರು ನೇತ್ರಾವತಿ ನದಿಯ ಪಕ್ಕದಲ್ಲಿಯೂ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದಿದ್ದು ಹೆದ್ದಾರಿಯಲ್ಲಿ ಸಂಚಾರ ಮಾಡುವವರು ಮೂಗಿಗೆ ಕೈಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಆಡಳಿತ ಇಲ್ಲದೆ ಸೊರಗುತ್ತಿರುವ ಪುರಸಭೆಯಲ್ಲಿ ಕಸದ ಸಮಸ್ಯೆ. ಇದರ ಪರಿಹಾರಕ್ಕಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.








