


ಬಂಟ್ವಾಳ: ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆಯಲ್ಲಿ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು, ಯುವಜನಾಂಗವೂ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಕಥೋಲಿಕ ಮಹಾ ಸಮಾವೇಶ ಯಶಸ್ವಿಯಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಅತೀ ವಂದನೀಯ ಮ್ಯಾಕ್ಸಿಂ ನೊರೋನ್ಹಾ ಹೇಳಿದರು.
ಕಥೋಲಿಕ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಫೆಬ್ರವರಿ 2 ರಂದು ಮಡಂತ್ಯಾರು ಚರ್ಚ್ ಮೈದಾನದಲ್ಲಿ ನಡೆಯಲಿರುವ ಕಥೋಲಿಕ ಮಹಾ ಸಮಾವೇಶದ ಪೂರ್ವಭಾವಿಯಾಗಿ ಅವರು ಬುಧವಾರ ಸಮಾವೇಶದ ಕಚೇರಿಯನ್ನು ಮಡಂತ್ಯಾರು ಚರ್ಚ್ ಬಿಲ್ಡಿಂಗ್ ನಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಮಾವೇಶ ಹೆಸರು ಅಥವಾ ಪ್ರತಿಷ್ಠೆಗೆಂದು ನಡೆಸುತ್ತಿಲ್ಲ, ಈ ಸಮಾವೇಶದ ಮೂಲಕ ಕ್ರೈಸ್ತ ಸಮುದಾಯ, ಯುವಜನಾಂಗಕ್ಕೆ ಜಾಗೃತಿಯ ಮೂಲಕ ರಾಷ್ಟ್ರ ಕಟ್ಟುವ ನಿರ್ಮಾಣದ ಉದ್ದೇಶವನ್ನು ಇರಿಸಿಕೊಂಡಿದೆ ಎಂದರು. ಇದರ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ ಅಭಿನಂದಿಸಿದ ಅವರು, ದೊಡ್ಡ ಮಟ್ಟದ ಈ ಸಮಾವೇಶದ ಯಶಸ್ಸಿಗೆ ಸರ್ವರೂ ಸಹಕರಿಸುವಂತೆ ಮನವಿ ಮಾಡಿದರಲ್ಲದೆ, ಸಮುದಾಯ, ರಾಷ್ಟ್ರದ ಹಿತಕ್ಕೆ ಪೂರಕವಾದ ಕಾರ್ಯ ಯಶಸ್ಸು ಕಾಣಲಿ ಎಂದರು.
ಸಭಾಧ್ಯಕ್ಷತೆ ಮಂಗಳೂರು ಕಥೋಲಿಕ್ ಸಭಾದ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೋಸ್ತಾ ಮಾತನಾಡಿ, ಇದೇ ಮೊದಲ ಬಾರಿಗೆ ಮಂಗಳೂರಿನಿಂದ ಹೊರಭಾಗದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸರ್ವರೂ ಸಹಕಾರದೊಂದಿಗೆ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರಲಿ ಎಂದರು.
ಐಸಿವೈಎಂ ನಿರ್ದೇಶಕರಾದ ವಂದನೀಯ ಫಾದರ್ ರೊನಾಲ್ಡ್ ಡಿಸೋಜರವರು ಮಾತನಾಡಿ, ಕಥೋಲಿಕ್ ಸಭಾವು ಹೊಸ ವರ್ಷದಲ್ಲಿ ಹೊಸ ಆಶಯಗಳೊಂದಿಗೆ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಯುವ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ನಡೆಸುತ್ತಿದೆ, ಇದು ಖುಷಿಯ ವಿಚಾರ ಎಂದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರುಗಳಾದ ವಂದನೀಯ ಬೆಝಿಲ್ ವಾಸ್ ಮಾತನಾಡಿ, ಮೂರು ಧರ್ಮಪ್ರಾಂತ್ಯಗಳ ಪ್ರತಿಯೊಬ್ಬರೂ ತೊಡಗಿಸಿಕೊಂಡಾಗ ಸಮಾವೇಶ ಯಶಸ್ವಿಯಾಗುತ್ತದೆ ಎಂದರು. ಐಸಿವೈಎಂ ನ ಅಧ್ಯಕ್ಷ ಲಿಯೋ ಸಲ್ಡಾನಾ ಮಾತನಾಡಿ, ಯುವಜನಜಾಗೃತಿಯ ಈ ಕಾರ್ಯಕ್ರಮಕ್ಕೆ ಐಸಿವೈಎಂ ಪೂರ್ಣ ಸಹಕಾರ ನೀಡಲಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೂರಿಕುಮೇರು ಚರ್ಚಿನ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಮಾತನಾಡಿ, ಹಾದಿ ತಪ್ಪುತ್ತಿರುವ ಯುವಜನರಿಗೆ ಸರಿಯಾದ ದಾರಿಯನ್ನು ತೋರುವಂತಹಾ ಸಮಾವೇಶ ಈ ಕಾಲದ ಅನಿವಾರ್ಯವಾಗಿದ್ದು, ಇದು ಸಮಾಜದ ಸಂಘಟನೆಗೂ ಕಾರಣವಾಗುತ್ತದೆ, ಪ್ರೀತಿಯನ್ನು ಮರೆತು ಕೇವಲ ದ್ವೇಷವನ್ನೇ ಮೈಗೂಡಿಸಿಕೊಂಡವರಿಗೆ ಜಾಗೃತಿ ಮೂಡಿಸುವಲ್ಲಿಯೂ ಸಮಾವೇಶ ಯಶಸ್ಸು ಕಾಣಲಿ ಎಂದರು.
ಬೆಳ್ತಂಗಡಿ ವಲಯದ ಧರ್ಮಗುರುಗಳಾದ ಸೆಬಿ ಥೋಮಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಟೆರ್ರಿ ಪಾಯಸ್, ಮಂಗಳೂರು ವೇದಿಕೆಯಲ್ಲಿದ್ದರು. ಸಮಾವೇಶದ ಸಂಚಾಲಕ ಜೋಯಲ್ ಮೆಂಡೋನ್ಸಾ ಸ್ವಾಗತಿಸಿದರು. ವಾಲ್ಟರ್ ಮೊನಿಸ್ ವಂದಿಸಿದರು. ಫ್ರಾನ್ಸಿಸ್ ವಿವಿ ಕಾರ್ಯಕ್ರಮ ನಿರ್ವಹಿಸಿದರು.






