ವಿಟ್ಲ: ಕುಂಬಾರ ಸಮಾಜ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಸದೃಢವಾಗಿ ಎದ್ದು ನಿಲ್ಲದಿರುವುದು ಸಮಗ್ರ ಅಭಿವೃದ್ಧಿಗೆ ತೊಡಕಾಗಿದೆ. ಪ್ರತಿಯೊಬ್ಬರೂ ಸುಶಿಕ್ಷಿತರಾಗುವುದರೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ಬರಬೇಕಾಗಿದೆ. ಸಮುದಾಯ ಭವನ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಪಾಲುದಾರರಾಗಬೇಕು ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಹೇಳಿದರು.
ಅವರು ವಿಟ್ಲ ಕುಲಾಲ ಸಂಘದ ಆಶ್ರಯದಲ್ಲಿ ಭಾನುವಾರ ಸಂಘದ ನಿವೇಶನದಲ್ಲಿ ನಡೆದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್ ಕುಳಾಯಿ ಮಾತನಾಡಿ ನಾವು ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಛಲ, ಆತ್ಮವಿಶ್ವಾಸದಿಂದ ತಮ್ಮ ಪ್ರತಿಭೆ, ಸಾಧನೆಗಳನ್ನು ಮೆರೆಯಬೇಕೆಂದು ತಿಳಿಸಿದರು.
ನಮ್ಮ ಜೀವನ ಒಂದು ಹೆಜ್ಜೆಯಿಂದಲೇ ಆರಂಭವಾಗುತ್ತದೆ. ಆದರೆ ಆ ಹೆಜ್ಜೆಯ ಹಾದಿಯನ್ನು ಗಮ್ಯದ ಕಡೆಗೆ ಸಾಗಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕೆಂದು ಪುಣಚ ಗ್ರಾ.ಪಂ. ಪಿಡಿಒ ಲಾವಣ್ಯ ಅಭಿಪ್ರಾಯ ಪಟ್ಟರು.
ವಿಟ್ಲ ಕುಲಾಲ ಸಂಘದ ಅಧ್ಯಕ್ಷ ದಿವಾಕರ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿವಮೊಗ್ಗ ಅಟೋ ಮಾರ್ಕ್ಸ್ ಮೆನೇಜರ್ ಎಂ. ಕೃಷ್ಣಪ್ಪ ಕುಲಾಲ್ ಇರಂದೂರು, ಮಹಿಳಾ ಘಟಕದ ಅಧ್ಯಕ್ಷೆ ಉಷಾ ವಸಂತ ಎರುಂಬು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಕರಾಟೆಪಟು ನಿವೇದಿತಾ ಬ್ರಾಣಪಾದೆ, ಅಂತರಾಷ್ಟ್ರೀಯ ಮಟ್ಟದ ವಿಶೇಷಚೇತನ ಚೆಸ್ ಆಟಗಾರ್ತಿ ಯಶಸ್ವಿ ಕೆ. ಕುದುಮಾನ್ ಅವರನ್ನು ಸನ್ಮಾನಿಸಲಾಯಿತು. ಭವಿಷ್, ವಿನುಷ್, ಆವಿಷ್ಕಾರ್ ಹಾಗೂ ಶೈಕ್ಷಣಿಕ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಕ್ರೀಡಾ ಕಾರ್ಯದರ್ಶಿ ಅರುಣಾಕರ ಪೆರುವಾಜೆ ಸ್ವಾಗತಿಸಿದರು. ರಮಾನಾಥ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕಲಾರಸಿಕ ಸುರೇಶ್ ಕುಲಾಲ್ ವರದಿ ವಾಚಿಸಿದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರ ರಮಾನಾಥ್, ಮೀನಾಕ್ಷಿ ನಾರಾಯಣ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here