

ವಿಟ್ಲ: ಜ್ಞಾನ ಸಂಪನ್ನತೆಯಿಂದ ದೇಶ ಸರ್ವ ಸಂಪನ್ನತೆಯನ್ನು ಗಳಿಸುತ್ತದೆ. ಪ್ರತಿಯೊಂದು ಮಗುವಿಗೆ ಸುವಿದ್ಯೆ ಲಭಿಸಿದಾಗ ಶ್ರೇಷ್ಠ ವ್ಯಕ್ತಿ ನಿರ್ಮಾಣವಾಗಲು ಸಾಧ್ಯ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ವಿಟ್ಲ ವಿಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗ ಮಂದಿರದಲ್ಲಿ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ವಿಟ್ಲ, ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರದ ಸಹಯೋಗದಲ್ಲಿ ನಡೆದ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧ್ರುವ ತನ್ನ ಸಂಸ್ಕಾರದಿಂದ ದೈವತ್ಯಕ್ಕೆ ಏರಿದ್ದಾನೆ. ಮಕ್ಕಳು ಧ್ರುವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಾತ್ವಿಕ ಆಹಾರ ಪದ್ಧತಿ ಜೀವನಕ್ಕೆ ಪೂರಕವಾಗಿದೆ. ಮಕ್ಕಳಿಗೆ ಸಂಸ್ಕರಿಸಿ ವಿದ್ಯೆ ನೀಡಿದಾಗ ಚೈತನ್ಯಯುತನಾಗಿ ಬೆಳಗುತ್ತಾನೆ. ಮಕ್ಕಳು ದೇಶದ ಸಂಪತ್ತಾಗಿ ಬೆಳಗಬೇಕು ಎಂದು ತಿಳಿಸಿದರು.
ಪೇಜಾವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಣ್ಯ ವೆಂಕಟೇಶ್ವರ ಭಟ್ ಅವರು ಪೇಜಾವರಶ್ರೀಗಳಿಗೆ ನುಡಿನಮನ ಸಲ್ಲಿಸಿದರು. ವೇ. ಮೂ. ಭಾರ್ಗವ ಉಡುಪ ಮಾದಕಟ್ಟೆ ಅವರ ನೇತೃತ್ವದಲ್ಲಿ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ನಡೆಯಿತು. ೨೪೦೦ ವಿದ್ಯಾರ್ಥಿಗಳ ಹೆಸರಿನಲ್ಲಿ ಮಹಾಯಾಗ ನಡೆಯಿತು.
ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಗೌರವಾಧ್ಯಕ್ಷ ಸದಾಶಿವ ಆಚಾರ್ಯ, ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರದ ಅಧ್ಯಕ್ಷ ಹರೀಶ್ ಸಿ. ಎಚ್., ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ಮತ್ತಿತರರು ಉಪಸ್ಥಿತರಿದ್ದರು.
ಸುಧಾ ವಿಟ್ಲ ಪ್ರಾರ್ಥಿಸಿದರು. ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಅಧ್ಯಕ್ಷ ಎ. ರಾಘವೇಂದ್ರ ಪೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿನಯ ಆಲಂಗಾರು ವಂದಿಸಿದರು. ಪರಮೇಶ್ವರ ಆಚಾರ್ಯ ಮಂಕುಡೆ ಕಾರ್ಯಕ್ರಮ ನಿರೂಪಿಸಿದರು.







