ಬಂಟ್ವಾಳ: ಈ ದೇಶದ ಬಹುತೇಕ ಮಾಧ್ಯಮಗಳು ಸಂಘಪರಿವಾರಿದ ಬುಲೆಟಿನ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇತಿಹಾಸವನ್ನು ತಿರುಚುವ ಮೂಲಕ ಸುಳ್ಳನ್ನೇ ಸತ್ಯ ಎಂದು ಪ್ರತಿಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಬಿಜೆಪಿಯು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದು, ಈ ಕಾರ್ಯದಲ್ಲಿ ಕಾಂಗ್ರೆಸ್‌ನ ಪಾಲೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಸುದ್ದಿ ಟಿವಿಯ ಮುಖ್ಯ ಸಂಪಾದಕ, ಹಿರಿಯ ಪತ್ರಕರ್ತ ಶಶಿಧರ್ ಭಟ್ ಬೆಂಗಳೂರು ಹೇಳಿದ್ದಾರೆ.


ಎನ್‌ಆರ್‌ಸಿ, ಸಿಎಎ ಕಾಯ್ದೆ ವಿರೋಧಿಸಿ, ಮಂಗಳೂರಿನಲ್ಲಿ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಸಮಾನ ಮನಸ್ಕ ಮುಸ್ಲಿಂ ಸಂಘಟನೆಗಳು, ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಸಂಜೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಹಿಂದೂ ರಾಷ್ಟ್ರ ಸ್ಥಾಪನೆಯ ದೃಷ್ಟಿಯಿಂದ ಕೇಂದ್ರ ಸರಕಾರವು ಮುಸ್ಲಿಮರು ಸೇರಿದಂತೆ ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವವರನ್ನು ನಾಶ ಮಾಡುವ ಉದ್ದೇಶದಿಂದ ಇಂತಹ ಕಾನೂನನ್ನು ಜಾರಿ ತರುತ್ತಿದ್ದು, ದೇಶದ ಬಹುತ್ವದ ನಾಶಕ್ಕೆ ಹೆಜ್ಜೆಯನ್ನಿಟ್ಟಿದೆ. ನಾವೇ ಆಯ್ಕೆ ಮಾಡಿ ಕಳುಹಿಸಿದವರು ಈಗ ನೀವು ಯಾರು ಎಂದು ಕೇಳಿ ಪೌರತ್ವ ಸಾಭೀತು ಪಡಿಸಲು ಹೇಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶ ಯಾರಪ್ಪನ ಸೊತ್ತು ಅಲ್ಲ:
ದೇಶ ಸಂಘಪರಿವಾರ, ಯಾರಪ್ಪನ ಸೊತ್ತು ಅಲ್ಲ. ಸೈದ್ಧಾಂತಿಕವಾಗಿ ನಾವು ನಮ್ಮ ವೈರಿಯನ್ನು ಗುರುತಿಸಿಕೊಂಡು ಅವರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ, ಮಾನವೀಯತೆಯ, ಸಂವಿಧಾನದ ವೈರಿಗಳು. ಬಹು ಸಂಸ್ಕೃತಿಗಳನ್ನು ಗುರುತಿಸಿ ನಾಶಪಡಿಸುವುದೇ ಇಂತಹ ಸರ್ವಾಧಿಕಾರಿಗಳ ಉದ್ದೇಶ. ಮೋದಿ, ಅಮಿತ್ ಶಾ ಇದಕ್ಕಾಗಿ ಒಂದೊಂದೇ ಕಾರ್ಯ ಸೂಚಿಯನ್ನು ಸಿದ್ಧಪಡಿಸಿದೆ. ಈ ಕಾರ್ಯಸೂಚಿಯು ನಾಗಪುರದಿಂದ ಆರಂಭವಾಗಿ ದೇಶವ್ಯಾಪಿದೆ ಎಂದು ಅವರು ಹೇಳಿದರು.


ಮಾಜಿ ಸಚಿವ ಬಿ.ರಮಾನಾಥ ರೈ, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮುಹಮ್ಮದ್ ಶಾಫಿ, ಅಶ್ರಫ್ ಫೈಝಿ ಕೊಡಗು ಅವರು ಉದ್ಘಾಟನಾ ಮಾತುಗಳನ್ನಾಡಿದರು.
ಧಾರ್ಮಿಕ ಮುಖಂಡ ಅಸಯ್ಯದ್ ಯಹ್ಯಾ ತಂಙಳ್ ಅವರು ದುವಾ ನೆರವೇರಿಸಿದರು.
ಪ್ರಮುಖರಾದ ಅನೀಸ್ ಕೌಸರಿ, ಮುಹಮ್ಮದ್ ಕುಂಞಿ, ಹನೀಫ್ ಕಾಟಿಪಳ್ಳ, ಖಲೀಲ್ ತಲಪಾಡಿ, ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್, ಪಿ.ಎ.ರಹೀಂ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡಿ, ಕೇಂದ್ರ ಸರಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ಮಂಗಳೂರು ಗೋಲಿಬಾರ್ ಘಟನೆ ಉಲ್ಲೇಖಿಸಿ ಪೊಲೀಸರ ವಿರುದ್ಧವೂ ಕಿಡಿಕಾರಿದರು.
ಈ ಸಂದರ್ಭದಲ್ಲಿ ಜಿಪಂಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುನೀಶ್ ಅಲಿ, ಮೊದಲಾದವರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೆ.ಎಚ್.ಅಬೂಬಕ್ಕರ್ ವಂದಿಸಿದರು. ಅಕ್ಬರ್ ಆಲಿ ಪೊನ್ನೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here