ಒಡಿಯೂರು ಶ್ರೀಗಳ ಸಂತಾಪ:


ವಿಶ್ವವಂದ್ಯ, ವಿಶ್ವಸಂತ, ಉಡುಪಿ ಅಷ್ಟಮಠದ ಹಿರಿಯ ಯತಿಶ್ರೇಷ್ಠರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದುದು ಭಾರತೀಯ ಸನಾತನ ಪರಂಪರೆಗೆ ತುಂಬಲಾರದ ನಷ್ಟ. ಲೋಕೋದ್ಧಾರದ ಚುಕ್ಕಾಣಿ ಹಿಡಿದು, ಸಮನ್ವಯತೆಯ ಹರಿಕಾರರಾಗಿ ಆಧ್ಯಾತ್ಮಿಕ ಪರಿವ್ರಾಜಕರಾಗಿದ್ದ ಪೂಜ್ಯ ಶ್ರೀಗಳವರು ಅಗಲಿರುವುದು ತುಂಬಾ ದುಃಖವನ್ನುಂಟು ಮಾಡಿದೆ.

 

ಮಾಣಿಲಶ್ರೀ ಸಂತಾಪ:

ದೇಶದ ಸಂತ ಪರಂಪರೆಗೆ ಅರ್ಥ ತುಂಬಿದ ಮಹಾ ಸಂತ ಪೇಜಾವರ ಶ್ರೀಶ್ರೀ ವಿಶ್ವೇಶ ತೀರ್ಥ ಪಾದರುನಡೆದಾಡುವ ದೇವರಂತೆ ನಮ್ಮ ನಿಮ್ಮ ನಡುವೆ ಮಾರ್ಗದರ್ಶಕರಾಗಿ ನಡುವೆ ಇದ್ದವರು. ಭಾರತ ದೇಶ ಓರ್ವ ಮಹಾನ್ ಸಂತ ಶ್ರೇಷ್ಠರನ್ನು ಕಳೆದುಕೊಂಡಿದೆ. ಆದರೆ ಅವರ ತೇಜಸ್ಸು, ವಿದ್ವತ್ತು, ಸಮಾಜದ ಚಿಂತನೆ, ದೇಶದ ಚಿಂತನೆ, ಸಮನ್ವಯತೆ, ಮನುಕುಲಕ್ಕೆ ಅವರು ನೀಡಿದ ಸಂದೇಶಗಳ ಮೂಲಕ ಅವರು ನಮ್ಮ ಜತೆಗೇ ಇದ್ದಾರೆ ಎನ್ನುವುದು ನಿತ್ಯಸತ್ಯ. ಪೂಜ್ಯ ಶ್ರೀಗಳವರ ಅಗಲುವಿಕೆ ದುಃಖವನ್ನುಂಟು ಮಾಡಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಣಿಯೂರುಶ್ರೀ ಸಂತಾಪ:


ರಾಷ್ಟ್ರಪ್ರೇಮದ ಸಂದೇಶಗಳ ಮೂಲಕ ಜಗತ್ತಿನಲ್ಲಿಯೇ ಜನಮನ್ನಣೆ ಪಡೆದ ಮಾಧ್ವ ಪರಂಪರೆಯನ್ನು ಪಸರಿಸಿದ ಮಹಾಸಂತರಾಗಿದ್ದಾರೆ. ಅವರ ಮಾರ್ಗದರ್ಶಕ ಸಂದೇಶ, ತತ್ವವಿಚಾರಗಳು ನಮ್ಮೊಂದಿಗೆ ಸದಾ ಇರುತ್ತವೆ. ಪೇಜಾವರಶ್ರೀ ಕೃಷ್ಣಸಾಯುಜ್ಯಗೊಂಡಿರುವುದು ಅಪಾರ ದು:ಖ ತಂದಿದೆ ಎಂದು ಕನ್ಯಾನ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

 

ಬಾಳೆಕೋಡಿಶ್ರೀ ಸಂತಾಪ:


ದಲಿತಕೇರಿಗಳ ಭೇಟಿ, ದಲಿತರೊಂದಿಗೆ ಸಹ ಪಂಕ್ತಿ ಇನ್ನಿತರ ಸಾಮಾಜಿಕ ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಮಾಧ್ವ ಪರಂಪರೆಯಲ್ಲಿ ವಿಶೇಷ ಸ್ಥಾನಮಾನ ಪಡೆದ ಪೇಜಾವರಶ್ರೀ ವಿಶ್ವೇಶತೀರ್ಥರು ಸಮಕಾಲೀನ ಅಗ್ರಮಾನ್ಯ ಸಂತರ ಸಾಲಿನಲ್ಲಿ ಗುರುತಿಸಲ್ಪಟ್ಟಿದ್ದಾರೆ. ಪೂಜ್ಯರು ಕೃಷ್ಣಪಾದೈಕ್ಯವಾಗಿರುವುದು ಅತೀವ ದು:ಖವಾಗಿದೆ ಎಂದು ಕನ್ಯಾನ ಬಾಲೆಕೋಡಿ ಸದ್ಗುರು ಡಾ.ಶಶೀಕಾಂತಮಣಿ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here