

ವಿಟ್ಲ: ಸುಖಭೋಗದ ಬದುಕು ಬದುಕಲ್ಲ, ತ್ಯಾಗ ಬದುಕೇ ಉತ್ತಮ. ಮಾನವಧರ್ಮ ಉದ್ಧಾರಕ್ಕೆ ಭಗವಂತನ ಅವತಾರವಾಗುತ್ತದೆ. ದೇವಸ್ಥಾನ, ದೈವಸ್ಥಾನ ದೈವ ದೇವರುಗಳಿಗಾಗಿ ಇರುವುದಿಲ್ಲ, ಬದಲಾಗಿ ಭಕ್ತರಿಗಾಗಿ ಎಲ್ಲವೂ ಇರುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕರ್ನಾಟಕ ದಕ್ಷಿಣ ಪ್ರಾಂತ ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ದಿಕ್ಸೂಚಿ ಭಾಷಣ ಮಾಡಿ, ದುಷ್ಟ ಶಕ್ತಿಯನ್ನು ನಾಶ ಮಾಡಬೇಕು. ಗೋ ಸಂರಕ್ಷಣೆಯನ್ನು ಮಾಡಬೇಕು. ಮಹಿಳೆಯರ ಮೇಲೆ ಗೌರವವಿರಬೇಕು. ಮಹಿಳೆಯರು ಮಕ್ಕಳಿಗೆ ಯೋಗ್ಯ ರೀತಿಯಲ್ಲಿ ಸಂಸ್ಕಾರ, ಶಿಕ್ಷಣ, ಸಂಸ್ಕೃತಿಯ ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ನಾರಾಯಣ ರೈ ಅಡ್ವಾಯಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮೊಕ್ತೇಸರ ವೆಂಕಪ್ಪ ಮಾರ್ಲ ಕಲಾತ್ತಿಮಾರು ಉಪಸ್ಥಿತರಿದ್ದರು. ಭೋಜನ ಸೇವಾಕರ್ತ ಶಿವಾಂಶ್ ಅವರನ್ನು ಗೌರವಿಸಲಾಯಿತು.
ಪ್ರಭಾಕರ ಶೆಟ್ಟಿ ಕಲಾತ್ತಿಮಾರು ಸ್ವಾಗತಿಸಿದರು. ಮನೋಹರ ಶೆಟ್ಟಿ ಪೇರಡ್ಕ ವಂದಿಸಿದರು. ಸವಿತಾ ಎಸ್.ಭಟ್ ಅಡ್ವಾಯಿ ಆಶಯಗೀತೆ ಹಾಡಿದರು. ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಕುಂಟುಕುಡೇಲು ಬ್ರಹ್ಮಶ್ರೀ ರಘುರಾಮ ತಂತ್ರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನಾಗದೇವರಿಗೆ ತಂಬಿಲ, ದೇವರಿಗೆ ಕಲಶ ಪೂಜೆ, ಅಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ವರ್ಷಾವಧಿ ರಂಗ ಪೂಜೆ ಉತ್ಸವ ನಡೆಯಿತು.








