ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ. ಕಳೆದ ಒಂಭತ್ತು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೇಜಾವರ ಸ್ವಾಮೀಜಿ ಇವತ್ತು ಪೇಜಾವರ ಮಠದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ‘ಪೇಜಾವರ ಶ್ರೀಗಳು’ ಎಂದೇ ಚಿರಪರಿಚಿತರು. 1931ರ ಏಪ್ರಿಲ್​​ 27ರ ಸೋಮವಾರದಂದು ಜನಿಸಿದ ವಿಶ್ವೇಶತೀರ್ಥರು, ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಸುಪುತ್ರ. ಉಡುಪಿಯಿಂದ ಸುಮಾರು 120 ಕಿ.ಮೀ. ದೂರದಲ್ಲಿರುವ ಉಪ್ಪಿನಂಗಡಿ ಸಮೀಪದ ರಾಮಕುಂಜ, ಪೇಜಾವರ ಶ್ರೀಗಳ ಜನ್ಮಸ್ಥಳ. ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಾಮಕುಂಜದ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಿ ಮುಗಿಸಿದ ವೆಂಕಟರಮಣಗೆ ಎಂಟು ವರ್ಷ ತುಂಬುತ್ತಿರುವಾಗಲೇ ಸನ್ಯಾಸ ದೀಕ್ಷೆ ನಡೆಯುತ್ತದೆ.

ಅದಾಗಲೇ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು ಪರ್ಯಾಯದ ಅವಧಿ ಮುಗಿದ ಬಳಿಕ ಲೋಕ ಸಂಚಾರಕ್ಕೆ ತೆರಳುತ್ತಾರೆ. ಪಯಣದ ಹಾದಿಯಲ್ಲಿ ವ್ಯಾಸತೀರ್ಥರ ತಪೋಭೂಮಿ ಹಂಪಿಗೆ ‘ವೆಂಕಟರಮಣ’ರನ್ನು ಕರೆಸಿಕೊಂಡ ವಿಶ್ವಮಾನ್ಯ ಶ್ರೀಗಳು, 1938ರ ಡಿಸೆಂಬರ್​ 3ರಂದು ಹಂಪಿಯ ಮುಖ್ಯಪ್ರಾಣನ ಸನ್ನಿಧಿಯಲ್ಲಿ ರಾಮಕುಂಜ ಎನ್ನುವ ಪುಟ್ಟ ಹಳ್ಳಿಯ ಬಾಲಕನಿಗೆ ಸನ್ಯಾಸ ದೀಕ್ಷೆ ಬೋಧಿಸುತ್ತಾರೆ. ಅಂದಿನಿಂದ ವೆಂಕಟರಮಣ ಹೆಸರಿನ ಬಾಲಕ ವಿಶ್ವೇಶತೀರ್ಥರಾಗಿ, ಅಧೋಕ್ಷಜ ತೀರ್ಥರ ಸಂಸ್ಥಾದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ 32ನೆಯ ಯತಿಯಾಗಿ ಮಧ್ವಾಚಾರ್ಯರ ವೇದಾಂತ ಪೀಠವ್ನನೇರುತ್ತಾರೆ.

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ:

ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಕರೆತರಲಾಗುವುದು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಶ್ರೀಗಳ ಪಾರ್ಥೀವ ಶರೀರವನ್ನು ಇಡಲಾಗುವುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here