ಬಂಟ್ವಾಳ : ಮಾಣಿ ಬಾಲವಿಕಾಸ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಲಾ ಗೋಡೆಗಳಲ್ಲಿ ವಿವಾದಾತ್ಮಕ ಭಿತ್ತಿಪತ್ರಗಳನ್ನು ಅಂಟಿಸಿರುವ ಬಗ್ಗೆ ಸಾಹಿತ್ಯಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ ಘಟನೆ ರವಿವಾರ ನಡೆಯಿತು.

ತಾಲೂಕಿನ ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶಾಲೆಯ ಗೋಡೆಗಳಿಗೆ ಸಾಹಿತ್ಯ, ಇತಿಹಾಸಕ್ಕೆ ಸಂಬಂಧಿಸಿದ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಇವುಗಳಲ್ಲಿ ಹಲವು ಪೋಸ್ಟರ್ ಗಳಲ್ಲಿ ಇಸ್ಲಾಂ ಧರ್ಮದ ಬಗೆಗಿನ ಅವಹೇಳನಕಾರಿ ಸಂದೇಶ ಸಾರುತ್ತಿದ್ದು, ಇತಿಹಾಸದ ಘಟನೆಗಳನ್ನು ಒಂದು ಧರ್ಮದ ಮೇಲೆ ಎತ್ತಿಕಟ್ಟುವ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾಹಿತ್ಯ ಸಮ್ಮೇಳನವು ಇಸ್ಲಾಂ‌‌ ವಿರೋಧಿ ನಿಲುವು ತಾಳಿದೆ ಎನ್ನಲಾಗಿದ್ದು, ಶಾಲೆಯ ಗೋಡೆಗಳಿಗೆ ಅಂಟಿಸಿರುವ ಪೋಸ್ಟರ್ ಗಳು ಇದಕ್ಕೆ ಸಾಕ್ಷಿ ಎಂಬಂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಇದರ ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಮೋಹನ್ ರಾವ್ ಜೊತೆ ಮಾತನಾಡಿದಾಗ ಭಿತ್ತಿಚಿತ್ರಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಭಿತ್ತಿಚಿತ್ರಗಳನ್ನು ತೆಗೆಸುವ ಬಗ್ಗೆ ಕೇಳಿದಾಗ ಉಡಾಫೆಯ ಉತ್ತರ ನೀಡಿ ಜಾರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಬಾಲವಿಕಾಸ ಶಾಲೆಯ ಅಧ್ಯಕ್ಷರಲ್ಲಿ ಈ ಬಗ್ಗೆ ವಿಚಾರಿಸಿದಾಗ ಶಾಲೆಗೂ ಸಾಹಿತ್ಯ ಸಮ್ಮೇಳನದ ವತಿಯಿಂದ ಅಂಟಿಸಲಾದ ಭಿತ್ತಿಚಿತ್ರಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ತೆರವು:

ಶಾಲೆಯ ಗೋಡೆಗಳಲ್ಲಿ ಅಂಟಿಸಲಾಗಿದ್ದ ವಿವಾದಾತ್ಮಕ ಬರಹಗಳಿದ್ದ ಭಿತ್ತಿಪತ್ರಗಳನ್ನು ಸಾಹಿತ್ಯಾಸಕ್ತರು ಸಂಘಟಕರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಸಂಘಟಕರು ಅವುಗಳನ್ನು ತೆರವುಗೊಳಿಸಿದರು. ಹಂಪಿಯ ಇತಿಹಾಸದ ಬಗ್ಗೆ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಆದರೆ, ಪೋಸ್ಟರ್ ನಲ್ಲಿ ಒಂದು ಧರ್ಮವನ್ನು ಗುರಿಪಡಿಸುವ ಬರಹಗಳಿದ್ದವು ಎಂಬುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಸಾಹಿತ್ಯಾಸಕ್ತರು ದೂರಿದ ಹಿನ್ನಲೆಯಲ್ಲಿ ಪೋಸ್ಟರ್ ಗಳನ್ನು ತಕ್ಷಣ ತೆರವು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪೋಸ್ಟರ್ ನಲ್ಲೇನಿದೆ ?

ಇಂದಿಗೂ ಮುಂದುವರಿಯುತ್ತಿರುವ ಜಿಹಾದಿ ಕುತಂತ್ರಿಗಳು. ಹಂಪಿಯ ವಿಗ್ರಹಗಳನ್ನು‌ ಮುಸಲ್ಮಾನರು ಧ್ವಂಸಗೈದಿದ್ದಾರೆ. ಹಂಪಿಗೆ ಇತ್ತೀಚಿಗೆ ನಡೆದ ಭಂಜನೆಗೆ ಸಾಕ್ಷಿಗಳಿವು…., ಮುಂದುವರಿಯುತ್ತಿದೆ ಗೋರಿಗಳ ಆಕ್ರಮಣ…., ಪವಿತ್ರ ಹನುಮಪಾದ ಬೆಟ್ಟದಲ್ಲಿ ಬಿದ್ದಿದ್ದ ಕಂಬಕ್ಕೆ ಹಸಿರು ಬಟ್ಟೆ ಹೊದಿಸಿ ಸಿರ್ಮಿಸಲಾದ ಗೋರಿ….., ಗೋರಿಗಳ ಸಾಲಿಗೆ ಹನುಮಪಾದ ಬೆಟ್ಟದ ಬುಡದಲ್ಲಿ ಮತ್ತೊಂದು ನೂತನ ಅಕ್ರಮ ನಿರ್ಮಾಣದ ಗೋರಿ….., ಪುರಂದರ ಮಂಟಪವನ್ನು ವಶಪಡಿಸಿಕೊಳ್ಳಲು ಮುಸಲ್ಮಾನರ ಪ್ರಯತ್ನ…., ಹನುಮಾನ್ ಬೆಟ್ಟಕ್ಕೆ ಸುಲೈಮಾನ್ ದಾಳಿ…., ಪವಿತ್ರ ಹನುಮಪಾದ ಬೆಟ್ಟವನ್ನು ದಾದ ಪಹಾಡ್ ಮಾಡುವ ಮುಸಲ್ಮಾನರ ಹುನ್ನಾರ‌…, ಇಸ್ಲಾಂ ಪತಾಕೆ ಹಾರಿಸುವ ಯತ್ನ…‌, ಎನ್ನುವ ಶೀರ್ಷಿಕೆ ಹಾಗೂ ಫೋಟೊ ಶೀರ್ಷಿಕೆಯನ್ನು ಬರೆದು ಚಿತ್ರ ಸಹಿತ ಶಾಲೆಯ ಗೋಡೆಗೆ ಅಂಟಿಸಲಾಗಿದ್ದು, ಹಂಪಿಯ ಗತ ವೈಭವ ತಿಳಿಸುವ ಕಾರ್ಯ ನಡೆದಿಲ್ಲ ಎಂದು ಸಾಹಿತ್ಯಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here