

ಬಂಟ್ವಾಳ: ಗೂಡಿನಬಳಿಯಲ್ಲಿರುವ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಕಚೇರಿಯ ಬೀಗ ಮುರಿದು ಒಳಗಿನ ಕಟಾಟಿನಲ್ಲಿದ್ದ ಸೊತ್ತುಗಳು ಸೇರಿದಂತೆ 5 ಸಾವಿರ ರೂ.ನಗದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
ಕಾಲೇಜಿನಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದನ್ನು ವೀಕ್ಷಿಸಲು ಕಾಲೇಜಿನ ಪ್ರಾಂಶುಪಾಲ ಯೂಸೂಫ್ ಅವರು ಭಾನುವಾರ ಭೇಟಿ ನೀಡಿದಾಗ ಕಚೇರಿಯ ಬೀಗ ಮುರಿದಿರುವುದನ್ನು ಕಂಡಿದ್ದಾರೆ. ತತ್ಕ್ಷಣ ಒಳಗೆ ಹೋಗಿ ನೋಡಿದಾಗ 4 ಕಪಾಟಿನ ಲಾಕರನ್ನು ಮುರಿಯಲಾಗಿತ್ತು. ಘಟನೆಯಲ್ಲಿ ಕಪಾಟಿನಲ್ಲಿದ್ದ ಸಣ್ಣ ಸೋನಿ ಕ್ಯಾಮರಾ, ದೊಡ್ಡ ಕ್ಯಾನಾನ್ ಕ್ಯಾಮರಾ ಹಾಗೂ ಡಿವಿಆರ್, ಜತೆಗೆ 5 ಸಾವಿರ ರೂ.ನಗದು ಸೇರಿದಂತೆ ಒಟ್ಟು 20 ಸಾವಿರ ರೂ.ಮೌಲ್ಯದ ಸೊತ್ತುಗಳು ಕಳವಾಗಿದೆ.
ಡಿ. 28ರ ಸಂಜೆ ಕಾಲೇಜಿನ ಕಚೇರಿಗೆ ಬೀಗ ಹಾಕಿ ತೆರಳಲಾಗಿದ್ದು, ಭಾನುವಾರ ಬಂದು ನೋಡಿದಾಗ ಕಳವಿನ ಕುರಿತು ಅರಿವಿಗೆ ಬಂದಿದೆ ಎಂದು ಪ್ರಾಂಶುಪಾಲ ಯೂಸೂಫ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಅವಿನಾಶ್ ನೇತೃತ್ವದಲ್ಲಿ ಎಎಸ್ಐ ಸಂಜೀವ, ಹೆಡ್ಕಾನ್ಸ್ಟೇಬಲ್ ಸುರೇಶ್ ಪಡಾರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ತನಿಖೆ ನಡೆಸಿದ್ದಾರೆ.








