

ವಿಟ್ಲ: ಕೇಂದ್ರ ಸರಕಾರದ ಪ್ರತಿಯೊಂದೊಂದು ಆಡಳಿತ ನಡೆಗಳಲ್ಲಿಯೂ ವಿಭಜಿಸಿ ಆಳುವ ಕುಟಿಲ ತಂತ್ರಗಳಾಗಿವೆ. ದೇಶದ ನಾಗರಿಕರು ದೇಶೀಯ ನೆಲೆಯಲ್ಲಿ ಒಗ್ಗೂಡುವುದನ್ನು ಸಹಿಸದ ಆಡಳಿತ ಸರಕಾರ ಸ ದೇಶದ ಹೆಸರನ್ನು ಮುಂದಿಟ್ಟುಕೊಂಡು ಸುಳ್ಳು ಹೇಳುವ ಪ್ಯಾಸಿಸಂ ಮತ್ತು ಬ್ರಾಹ್ಮಣಿಯಂ ತತ್ವವನ್ನು ಹೇರುವ ಹುನ್ನಾರ ನಡೆಸುತ್ತಿದೆ ಎಂದು ಐಎಎಸ್ ಅಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರು ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ವಠಾರದಲ್ಲಿ ವಿಟ್ಲ ಮುಸ್ಲಿಂ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್ಆರ್ಸಿ ಮತ್ತು ಸಿಎಎ ವಿರುದ್ಧ “ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ” ಎಂಬ ಧ್ಯೇಯದಡಿಯಲ್ಲಿ ನಡೆಸಿದ ’ಬೃಹತ್ ಪ್ರತಿಭಟನಾ ಸಮಾವೇಶ’ ದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮೋದಿ, ಅಮಿತ್ ಶಾ ಇದೀಗ ನಮ್ಮ ಭಾರತೀಯತೆಗೆ, ಭಾರತೀಯರ ಪೌರತ್ವದ ಬಗ್ಗೆ ಕೈಹಾಕಿದೆ. ಆದರೆ, ಇದಕ್ಕೆ ಎಲ್ಲರೂ ಒಂದಾಗಿ ದೇಶದ್ಯಾಂತ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿದಾಗ ಮೋದಿ, ಅಮಿತ್ ಶಾನ ಲೆಕ್ಕಾಚಾರ ಉಲ್ಟಾವಾಗಿದ್ದು, ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಭಯದಿಂದ ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಪ್ಯಾಸಿಸಂನ ಮತ್ತು ಬ್ಯಾಹ್ಮಣೀಯಂ ಎರಡು ಒಟ್ಟಾಗಿ ಸೇರಿಕೊಂಡು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಇದರಿಂದ ಮುಸ್ಲಿಮರು, ದಲಿತರು ದಡ್ಡರಾಗಲ್ಲ, ಬದಲಾಗಿ ನನ್ನ ಹಿಂದು ಸಹೋದರರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಹಿಂದು ರಾಷ್ಟ್ರ ಏನೆಂಬುದನ್ನು ಮೊದಲು ಹಿಂದುಗಳು ಅರ್ಥ ಮಾಡಬೇಕಾಗಿದೆ. ಇದೊಂದು ಜಾತಿ ರಾಷ್ಟ್ರ, ಮನುಸೃತಿ ಆಧಾರದ ರಾಷ್ಟ್ರದ ಕಲ್ಪನೆಯಾಗಿದ್ದು, ಬ್ರಾಹ್ಮಣರು ಮೇಲೆ ಉಳಿದ ಹಿಂದೂಗಳೆಲ್ಲರೂ ಕೆಳಗೆ ಜೀವಿಸಬೇಕಾದ ಪರಸ್ಥಿತಿ ಬಂದೊದಗಲಿದೆ ಎಂದರು.
ಧರ್ಮದ ಆಧಾರದಲ್ಲಿ ಮೇಲೆ ಸರಕಾರವನ್ನು ಪ್ರತಿಯೊಬ್ಬರು ಪ್ರಶ್ನೆಸುವುದರ ಜೊತೆಗೆ ದಿಕ್ಕಿರಿಸಬೇಕಾಗಿದೆ. ಎನ್ಆರ್ಸಿ ಮಾಡಲು ಬದಲು ರಾಷ್ಟ್ರೀಯ ನಿರುದ್ಯೋಗಿಗಳ ಬಗ್ಗೆ ಸಮೀಕ್ಷೆ ನಡೆಸಬೇಕಾಗಿದೆ. ತ್ರಿವರ್ಣವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ, ಯಾರು ನಮ್ಮ ಹಕ್ಕನ್ನು ಕಿತ್ತುಕೊಳ್ಳಲಾರರು, ದಿಗ್ಬಂದನ ಸೆಲ್ ಕಟ್ಟಲಿ ಅದಕ್ಕೂ ಹೋಗಿ ಬರೋಣ. ಮನೆಗೆ ಅಧಿಕಾರಿಗಳು ಬಂದು ಎನ್ಪಿಆರ್ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡದಿರಿ. ಮನೆಗೆ ಬಂದರೆ ಅವರಿಗೆ ಚಹಾ ಕೊಟ್ಟು ಕಳುಹಿಸಿ. ಜನಗಣತಿಯ ಬಗ್ಗೆ ಮಾಹಿತಿ ಕೇಳಿದರೆ ನೀಡಿ ಎಂದು ಸ್ಪಷ್ಟ ಮಾಹಿತಿ ನೀಡಿದರು.
ಈ ದೇಶದ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ. ಬಹುಸಂಖ್ಯಾತರಿಗೂ ಅಪಾಯವಿದೆ. ಯಾವುದೇ ಹೋರಾಟವನ್ನು
ದೇಶದ ಹೆಸರಿನಲ್ಲಿ ಮಾತನಾಡದಂತೆ ನಮ್ಮ ಕಟ್ಟಿಹಾಕಲಾಗುತ್ತಿದೆ. ಇವೆಲ್ಲವನ್ನೂ ತಾಳ್ಮೆ, ಹೊಂದಾಣಿಕೆ, ಧೈರ್ಯದಿಂದ ಪ್ರತಿಭಟನೆ ನಡೆಸಿ ಹಿಮ್ಮಟ್ಟಿಸಬೇಕಾಗಿದೆ ಎಂದು ಹೇಳಿದರು.
ಭಾಷಣಕಾರ ನಿಖಿತ್ರಾಜ್ ಮೌರ್ಯ ಮಾತನಾಡಿ, ದೇಶದ ಆರ್ಥಿಕತೆ ನೆಲಕಚ್ಚಿದೆ. ಧರ್ಮದಿಂದ ದೇಶ ಕಟ್ಟಲು ಅಸಾಧ್ಯ. ಹೃದಯ, ಒಳ್ಳೆಯ ಮನಸ್ಸಿನಿಂದ ದೇಶ ಕಟ್ಟುವ ಕೆಲಸವಾಗಬೇಕಾಗಿದೆ. ಸಾರೇ ಜಹಾಂಸೆ ಅಚ್ಚ ಹಿಂದುಸ್ತಾನ್ ಹಮಾರ ಎಂದು ಹೇಳುವ ಅಸಲಿ ದೇಶ ಭಕ್ತರು ನಾವು. ದೇಶದ ಉಪರಾಷ್ಟ್ರಪತಿ ಅವರ ಕುಟುಂಬದವರಿಗೆ ದಾಖಲೆ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದಾಗ ಪಂಚರ್ ಹಾಕುವವರು ಎಲ್ಲಿಂದ ತರೋದು ಸ್ವಾಮಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿ ಅವರಿಗೆ ಇಂತಹ ಸ್ಥಿತಿ ಬಂದರೆ ಸಾಮಾನ್ಯ ಜನರ ಪಾಡೇನು ಎಂದು ಹೇಳಿದರು.
ವಿಟ್ಲ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ, ಜಿ.ಪಂ ಸದಸ್ಯ ಎಂ.ಎಸ್. ಮುಹಮ್ಮದ್ ಉದ್ಘಾಟನಾ ಭಾಷಣ ಮಾಡಿ, ಮೂಲ ನಿವಾಸಿಗಳಾದ ನಾವು ಈ ದೇಶಬಿಟ್ಟು ಕದಲುದಿಲ್ಲ. ಇದನ್ನು ಕೋಮುವಾದಿ ಶಕ್ತಿಗಳು ಅರ್ಥ ಮಾಡಬೇಕಾಗಿದೆ. ಭಾರತೀಯ ಸಂಸ್ಕೃತಿ, ಸಂವಿಧಾನವನ್ನು ಆಶಯವನ್ನು ಒಪ್ಪಿಕೊಂಡವರು ಮುಸ್ಲಿಮರು ಎಂದು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ, ಹನೀಫ್ ಖಾನ್ ಕೊಡಾಜೆ, ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್ ಮಾತನಾಡಿದರು.
ರಮಾನಾಥ ವಿಟ್ಲ, ಮುರಳೀಧರ ರೈ ಮಠಂತಬೆಟ್ಟು, ರಶೀದ್ ವಿಟ್ಲ, ಅಬ್ಬಾಸ್ ಅಲಿ, ಮಹಮ್ಮದ್ ಕುಂಞಿ ವಿಟ್ಲ, ವಿ.ಎಸ್. ಇಬ್ರಾಹಿಂ, ಅಥಾವುಲ್ಲ ಜೋಕಟ್ಟೆ, ಜಾಫರ್ ಫೈಝಿ, ಝಕಾರಿಯ ಗೋಳ್ತಮಜಲು, ಸಂತೋಷ್ ಭಂಡಾರಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಕಲಂದರ್ ಪರ್ತಿಪ್ಪಾಡಿ, ವಿಕೆಎಂ ಅಶ್ರಫ್ ಉಪಸ್ಥಿತರಿದ್ದರು.
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ವಿ.ಎಚ್ ಅಶ್ರಫ್ ಅಧ್ಯಕ್ಷತೆ ವಹಿಸಿ, ಪ್ರಮಾಣ ವಚನ ಬೋಧಿಸಿದರು. ಸಂಘಟಕ ಕಲಂದರ್ ಪರ್ತಿಪ್ಪಾಡಿ ಪ್ರಸ್ತಾವಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.







