






ನರಿಕೊಂಬು: ಗ್ರಾಮದ ನಾಯಿಲ ಪ್ರದೇಶದ ರೈತರು ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಡೆಂಜಿಪಾಡಿ ರಾಜಕಾಲುವೆ ಒತ್ತುವರಿಯಿಂದಾಗಿ ರೈತರ ಕೃಷಿ ಭೂಮಿಯಲ್ಲಿ ನೀರು ನಿಂತು ಭತ್ತ, ಅಡಿಕೆ, ತೆಂಗು ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದ್ದು, ಈ ಬಗ್ಗೆ ಬಂಟ್ವಾಳ ಪುರಸಭೆ, ದ.ಕ. ಜಿಲ್ಲಾಧಿಕಾರಿ, ಬಂಟ್ವಾಳ ತಹಶಿಲ್ದಾರ್, ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ನರಿಕೊಂಬು ಗ್ರಾಮಪಂಚಾಯತ್ ಗೆ ಲಿಖಿತ ಮನವಿ ನೀಡಿದರು. ಈವರೆಗೆ ರೈತರ ಸಮಸ್ಯೆ ಪರಿಹಾರ ಆಗಿರುವುದಿಲ್ಲ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬಂಟ್ವಾಳ ಘಟಕ ಬೆಂಬಲದೊಂದಿಗೆ ತಹಶಿಲ್ದಾರ್ ರಿಗೆ ಸಾಮೂಹಿಕವಾಗಿ ಮನವಿ ನೀಡಿ ಮಳೆಗಾಲಕ್ಕೆ ಮುಂಚಿತವಾಗಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಕಾಲುವೆಯ ಹೂಳನ್ನು ತೆಗೆಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಿ, ರೈತರ ಖಾಸಗಿ ಕೃಷಿ ಭೂಮಿಯನ್ನು ಉಳಿಸುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ನಾಯಿಲದ ಸ್ಥಳೀಯ ರೈತರು ಸಭೆ ಸೇರಿ ನಿರ್ಧರಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಬಂಟ್ವಾಳ, ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ, ರೈತ ಮುಖಂಡರಾದ ರಾಮಚಂದ್ರ ರಾವ್, ಸೂರಜ್ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.





