

ಮಂಗಳೂರು: ಮಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ ಶುಕ್ರವಾರ ತನಿಖೆ ಆರಂಭಿಸಿದೆ.
ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದಲ್ಲಿ 5 ಮಂದಿ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡಿದೆ. ಸಿಐಡಿ ತಂಡಕ್ಕೆ ತನಿಖೆ ನಡೆಸಿ ಪೂರ್ಣಗೊಳಿಸಿ, ವರದಿ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ.
ಶುಕ್ರವಾರ ಬೆಳಗ್ಗೆ ಕಮಿಷನರ್ ಕಚೇರಿಗೆ ಆಗಮಿಸಿದ ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದ ತನಿಖಾ ತಂಡ, ಗೋಲಿಬಾರ್ ಘಟನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ಇಡೀ ಘಟನೆಯ ಬಗ್ಗೆ ಅವಶ್ಯವಿರುವ ಕಡತಗಳ ಪರಿಶೀಲನೆ ನಡೆಸಿತು. ಪ್ರಮುಖ ದಾಖಲೆಗಳು ಹಾಗೂ ದಾಖಲಾದ ಪ್ರಕರಣಗಳ ವಿವರಗಳನ್ನು ಪಡೆದುಕೊಂಡಿತು ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸರಿಂದ ಗಲಭೆ ತನಿಖೆ ಮುಂದುವರೆದಿದೆ ಎಂಬ ಮಾಹಿತಿ ಸಿಕ್ಕೆದೆ.








