ದೋಷಗಳೆಂದೊಡನೆ ನಮ್ಮಲ್ಲಿರುವ ತಪ್ಪು ನಡವಳಿಕೆ ಅಥವಾ ತಪ್ಪು ತಿಳುವಳಿಕೆ ಎಂದು ಅರ್ಥೈಸುತ್ತೇವೆ. ನಾವು ನೀಡುವ ಅರ್ಥವು ನಿಜವಾಗಿಯೂ ಸರಿಯೇ ಆಗಿದೆ. ಪ್ರತಿಯೊಬ್ಬರಲ್ಲೂ ಬಹಳ ಮುಖ್ಯವಾಗಿ ನಾಲ್ಕು ದೋಷಗಳಿರುತ್ತವೆ. ಅವು ನಮ್ಮಲ್ಲಿರದಂತೆ ನಾವು ಪ್ರಯತ್ನಿಸಬೇಕು. ಭಯ, ಸೋಲಿನ ಕಲ್ಪನೆ, ಮರೆವು ಮತ್ತು ಅಶ್ರದ್ಧೆಗಳೇ ಆ ನಾಲ್ಕು ದೋಷಗಳು.
ಯಾವುದೇ ಕಾರ್ಯಕ್ಕೆ ಕೈಹಾಕುವಾಗಲೂ ನಮಗೆ ಆ ಕಾರ್ಯವನ್ನು ಸಾಂಗವಾಗಿ ನಡೆಸಲು ಸಾಧ್ಯವಾಗದೆಂಬ ಭಯ ನಮ್ಮಲ್ಲನೇಕರಲ್ಲಿ ಹುಟ್ಟುತ್ತದೆ. ಮನೆಕಟ್ಟಲು, ವ್ಯಾಪಾರ ಮಾಡಲು, ಕೃಷಿ ಅಭಿವೃದ್ಧಿಪಡಿಸಲು, ಶಿಕ್ಷಣ ಪಡೆಯಲು ಅಥವಾ ಇನ್ಯಾವುದೇ ಕೆಲಸಗಳಿಗೂ ಬಂಡವಾಳ ಬೇಕೇ ಬೇಕು. ನಮ್ಮಲ್ಲಿ ಬಂಡವಾಳ ಇಲ್ಲದೇ ಇದ್ದಾಗ ನಾವು ಬ್ಯಾಂಕುಗಳಿಂದ ಅಥವಾ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯಲೇ ಬೇಕಾಗುತ್ತದೆ. ಸಾಲ ಪಡೆದು ತೀರಿಸಲಾಗದಿದ್ದರೆ……………..!!! ಎಂಬ ಭಯದಿಂದ ಸಾಲ ಮಾಡದೇ ಹೋದರೆ ಯಾವುದೇ ಅಭಿವೃದ್ಧಿಯು ಕನಸಿನ ಮಾತೇ ಸರಿ. ಆದರೆ ಪಡೆದ ಸಾಲವನ್ನು ಮರುಪಾವತಿಸಲು ಸರಿಯಾದ ರೂಪು ರೇಷೆಗಳನ್ನು ಯೋಜಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ. ಪರವೂರಿಗೆ ಹೋಗದೇ ಒಂದು ಕಾರ್ಯ ನಡೆಯದು ಎಂದಾದರೆ ಹೋಗಲು ಭಯವೇಕೆ? ಹೋಗಿ ಶ್ರಮವಹಿಸಿದರೆ ಆ ಕಾರ್ಯ ಆಗಿಯೇ ಆಗುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಭಯವನ್ನು ಇನ್ನೊಬ್ಬರಿಗೂ ವರ್ಗಾಯಿಸಿ ನಾವು ಅವರನ್ನೂ ಭಯಪಡಿಸುವುದಿದೆ. ಹೆತ್ತವರು ಅಥವಾ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಮೂಡಿಸಿದರೆ, ಆ ವಿದ್ಯಾರ್ಥಿಯು ಯಶಸ್ಸನ್ನು ಹೊಂದಲಾರ. ಭಯಪಡುವುದು ಅಥವಾ ಭಯಪಡಿಸುವುದು ಇವೆರಡೂ ನಮ್ಮ ಪ್ರಗತಿಗೆ ಮಾರಕ. ನಾವು ಧೈರ್ಯಶಾಲಿಗಳಾಗಬೇಕು.
ನಮ್ಮಲ್ಲಿರುವ ಇನ್ನೊಂದು ದೌರ್ಬಲ್ಯ ಅಥವಾ ದೋಷವೆಂದರೆ ಸೋಲಿನ ಕಲ್ಪನೆ ಹೊಂದಿರುವುದು. ಈ ಕೆಲಸ ಮಾಡಿದರೆ ನಾನು ಸೋಲಬಹುದೋ ಎಂಬ ಭಯವಿದ್ದವನು ಯಾವುದೇ ಕೆಲಸವನ್ನೂ ಮಾಡಲಾರ. ಚುನಾವಣೆಯಲ್ಲಿ ಸ್ಪರ್ಧಿಸಲಾರ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಾರ. ಕೃಷಿಯನ್ನು ಮಾಡಲಾರ, ಮದುವೆಯಾಗಲಾರ, ಕುಟುಂಬ ಹೊಂದಲಾರ………ಹೀಗೆ ಯಾವುದನ್ನೂ ಹೊಂದಲಾರ. ಯಾಕೆಂದರೆ ಅವನು ಸೋಲಿನ ಭಯದಿಂದ ಎಲ್ಲವುಗಳಿಂದ ಬಹಳ ದೂರವೇ ಇರುತ್ತಾನೆ. ಇತರರಿಗೆ ಸೋಲಿನ ಭೀತಿ ಮೂಡಿಸುವುದೂ ದೋಷವೇ ಸರಿ, ಜ್ಯೋತಿಷಿಗಳ ಬಳಿಗೆ ಹೋದರೆ ಅವರು ಪಗಡೆ ಯಾ ಅಕ್ಕಿ ಕಾಳು ತಿರುಗಿಸಿಯೋ ಅಥವಾ ಜಾತಕ ಪರಿಶೀಲಿಸಿಯೋ ಹೇಳುವುದಿದೆ, ನೀನು ಈ ಬಾರಿ ………..ಕೆಲಸ ಮಾಡಬೇಡ, ಸೋಲು ಖಂಡಿತ. ಅವರನ್ನು ನಂಬಿ ನಾವು ದೂರವುಳಿಯುವುದರಿಂದ ನಮಗೆ ನಷ್ಠವಾಗದೆಂದು ಖಚಿತವಾಗಿ ನಿರ್ಧರಿಸಲಾಗದು. ಸೋಲಿನ ಕಲ್ಪನೆ ಹೊಂದುವುದು ಯಾ ಮೂಡಿಸುವುದು ಇವೆರಡೂ ದೋಷಗಳೇ ಆಲ್ಲವೇ? ಸೋಲನ್ನು ಕಲ್ಪಿಸಿಕೊಳ್ಳದೆ ಗೆಲುವನ್ನಷ್ಟೇ ಕಲ್ಪನೆ ಮಾಡಿಕೊಂಡು ಮುಂದಡಿಯಿಡುವ ಧೀರನಿಗೆ ಗೆಲುವು ಖಚಿತ. ನಮ್ಮ ಭಾವನೆ ಅಥವಾ ಊಹನೆಗಳಿಗೆ ಸಕಾರಾತ್ಮಕ ಫಲಿತಾಂಶವೇ ಬರುತ್ತದೆಂಬ ಸತ್ಯವನ್ನು ನಾವು ಮರೆಯಬಾರದು.
ಮರೆವನ್ನು ಯಾರೂ ಬಯಸರು. ಆದರೆ ಮರೆವು ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತದೆ ಎಂಬುದೇ ಅಪಾಯ. ತಾನಿದನ್ನು ಮರೆಯಲೇಬಾರದೆಂಬ ದೃಢತೆಯಿದ್ದಾಗ ಮರೆವು ನಮ್ಮಿಂದ ದೂರವಾಗುತ್ತದೆ. ಮರೆವಿಗೆ ಮೂಲಕಾರಣ ಅಶ್ರದ್ಧೆ ಎಂದರೂ ತಪ್ಪಲ್ಲ. ಅಶ್ರದ್ಧೆಯು ನಮ್ಮನ್ನು ವಿಕಸಿಸದಂತೆ ತಡೆಯುವ ದೋಷವೂ ಹೌದು. ಶ್ರದ್ಧಾವಾನ್ ಲಭತೇ ಜ್ಞಾನಂ ಎನ್ನುತ್ತೇವೆ. ಜ್ಞಾನ ಮಾತ್ರವೇ ಅಲ್ಲ, ಸರ್ವವೂ ಶ್ರದ್ಧೆಯುಳ್ಳವರಿಗೆ ಮಾತ್ರವೇ ದೊರೆಯುತ್ತದೆಂಬುದರಲ್ಲಿ ಅಪಸ್ವರವಿಲ್ಲ. ಮರೆವುಳ್ಳವನು ಹಣ ಕಳೆದುಕೊಳ್ಳುತ್ತಾನೆ, ನಷ್ಟಗಳಿಗೊಳಗಾಗುತ್ತಾನೆ, ಜ್ಞಾನದ ತೀಕ್ಷ್ಣತೆ ಆ ವ್ಯಕ್ತಿಯಲ್ಲಿ ತುಂಬ ಕಡಿಮೆಯಾಗುತ್ತದೆ, ಎಲ್ಲಕ್ಕಿಂತ ಮಿಗಿಲಾಗಿ ಅಪಹಾಸ್ಯ, ಅಪನಂಬಿಕೆ, ನಿಂದನೆಗಳಿಗೊಳಗಾಗುತ್ತಾನೆ. ಆದುದರಿಂದ ಮರೆಗುಳಿತನವನ್ನು ಹೋಗಲಾಡಿಸಲು ನಮ್ಮದೇ ಆದ ಬದ್ಧತೆಯಿರಬೇಕಾಗುತ್ತದೆ.
ವಿದ್ಯಾರ್ಥಿಯು ತಾನು ಓದಿದುದನ್ನು ಮರೆಯಬಾರದು. ಕೃಷಿಕನು ತಾನು ಮಾಡಬೇಕಾದ ಕೆಲಸವನ್ನು ಮರೆಯಬಾರದು. ಒಲೆಯಲ್ಲಿರಿಸಿರುವುದನ್ನು ಅಡುಗೆಯವನು ಮರೆಯಬಾರದು. ಹೋಟೆಲಿನಲ್ಲಿ ತಿಂಡಿ ತಿಂದವನು ಬಿಲ್ಲು ಪಾವತಿಸಲು ಮರೆತು ಹೊರ ಬರಬಾರದು, ಸ್ವಿಚ್ ಹಾಕಿದವನು ಅದನ್ನು ತೆಗೆಯಲು ಮರೆಯಬಾರದು. ಹೀಗೆ ಪ್ರತಿಯೊಬ್ಬನೂ ಮರೆವನ್ನು ಮರೆಯಲೇಬೇಕು. ಮರೆವು ನಮ್ಮಿಂದ ದೂರವಾಗಲು ನಮ್ಮ ಸ್ಥಿತ ಪ್ರಜ್ಞೆಯಲ್ಲದೆ ಬೇರೆ ಔಷಧವಿಲ್ಲ. ಕೆಲವರಲ್ಲಿರುವ ಮರೆವು ಎಷ್ಟು ತೀಕ್ಷ್ಣವಾಗಿರುತ್ತದೆಯೆಂದರೆ ಸ್ನಾನದ ಕೋಣೆಯಿಂದ ವಿವಸ್ತ್ರರಾಗಿ ಬೈರಾಸು ಹೆಗಲ ಮೇಲೇರಿಸಿಕೊಂಡು ಮೆರವಣಿಗೆ ಬರುವುದೂ ಇದೆ ಎಂದರೆ ನಗು ಬರುವುದಲ್ಲವೇ?
ನಮ್ಮಲ್ಲಿರುವ ಚತುರ್ದೋಷಗಳು ನಮಗೆ ಲಜ್ಜೆ, ಮುಜುಗರ, ಅಪಮಾನಗಳನ್ನು ತರಬಹುದೇ ಹೊರತು ಗೌರವದ, ಮನ್ನಣೆಯ ಸ್ಥಾನಮಾನಗಳನ್ನು ಎಂದಿಗೂ ಒದಗಿಸದು. ಈ ದೋಷಗಳಿಂದ ಮುಕ್ತರಾಗುವ ದೃಢ ನಿರ್ಧಾರಗಳನ್ನು ಮಾಡಿಕೊಂಡು ಬದುಕಿನಲ್ಲಿ ಯಶಸ್ಸನ್ನು ಪಡೆಯೋಣ. ಚತುರ್ದೋಷಗಳಿಂದ ಮುಕ್ತರಾಗಿ ಸಮಾಜದಲ್ಲಿರುವ ವಿಶೇಷವಾದ ಅವಕಾಶಗಳನ್ನು ನಮ್ಮದಾಗಿಸೋಣ.

ಲೇ : ರಮೇಶ ಎಂ ಬಾಯಾರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here