ವಿಟ್ಲ: ನಾವು ಪ್ರಕೃತಿಯಿಂದ ಸಿಗುವ ಸಂಪತ್ತನ್ನು ಪಡೆಯುತ್ತವೆಯೇ ಹೊರತು, ಮರಳಿ ನೀಡುವ ಮನೋಪ್ರವೃತ್ತಿ ನಮ್ಮಲ್ಲಿರದಿರುವ ಕಾರಣದಿಂದ ನಮ್ಮ ಕಣ್ಣ ಮುಂದೆಯೇ ಅಗಾಧ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಪರಿಸರ ಸಮತೋಲನಕ್ಕೆ ಅಗತ್ಯವಿರುವ ಅರಣ್ಯ ಸಂಪತ್ತು ನಶಿಸುತ್ತಿರುವ ಸಮಯದಲ್ಲಿ ಗಿಡಗಳನ್ನು ಹೆಚ್ಚುಹೆಚ್ಚು ನೆಟ್ಟು ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು, ಸಾಮಾಜಿಕ ಅರಣ್ಯ ವಲಯ ಬಂಟ್ವಾಳ ವತಿಯಿಂದ ಅನಂತಾಡಿ ಸಸ್ಯಕ್ಷೇತ್ರದಲ್ಲಿ ನಿರ್ಮಾಣವಾದ ಅನಂತ ಔಷಧಿ ವನ, ವೀರಕಂಬ ಕೆಲಿಂಜದಲ್ಲಿ ನಿರ್ಮಾಣವಾದ ವಲಯ ಅರಣ್ಯಾಧಿಕಾರಿಗಳ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಾಮಾಜಿಕ ಅರಣ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಪ್ರಕೃತಿಗೆ ಹಾಗೂ ಮುಂದಿನ ಜನಾಂಗಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕಾಗಿದೆ. ಮಕ್ಕಳ ಮೂಲಕ ಸಸಿಗಳನ್ನು ಬೆಳೆಸುವ ಕಾರ್ಯವಾದಾಗ ಭವಿಷ್ಯಕ್ಕೆ ಸಂಪತ್ತಾಗುವುದು ಎಂದು ತಿಳಿಸಿದರು.
ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್ ಮಾತನಾಡಿ, ಸಾಮಾಜಿ ಅರಣ್ಯ ವಿಭಾಗದಲ್ಲಿ ಪ್ರತಿ ತಾಲೂಕಿಗೆ ವಲಯ ಅರಣ್ಯಾಧಿಕಾರಿ ಕಚೇರಿ ಇದ್ದು, ನಾನಾ ಜಾತಿಯ ಗಿಡಗಳನ್ನು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರೈತರಿಗೂ ಪ್ರೋತ್ಸಾಹ ಮಾಡುವ ಕಾರ್ಯ ಇಲಾಖೆಯಿಂದ ನಡೆಯುತ್ತಿದೆ. ಇಲಾಖೆ ಹಾಕಿಕೊಂಡ ಯೋಜನೆಗಳನ್ನು ರೈತರು ಸದ್ವಿನಿಯೋಗಿಸಿಕೊಳ್ಳಬೇಕು. ನಶಿಸಿ ಹೋಗುವ ಔಷಧೀಯ ಸಸ್ಯಗಳನ್ನು ಉಳಿಸಿದಾಗ ನಾಟಿ ವೈದ್ಯ ಪದ್ಧತಿಯನ್ನೂ ಮುಂದುವರಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ. ಎಂ. ಅಬ್ಬಾಸ್ ಅಲಿ, ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ತನಿಯಪ್ಪ ಗೌಡ, ವೀರಕಂಬ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ, ಮಂಗಳೂರು ಉಪ ವಿಭಾಗ ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ.ಕರಿಕಾಲನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್, ಸಾಮಾಜಿಕ ಅರಣ್ಯ ಪುತ್ತೂರು ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಉಪವಲಯ ಅರಣಾಧಿಕಾರಿ ರಂಜಿತಾ ಪಿ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here