ವಿಟ್ಲ: ಭಾರತದ ಸಂಸ್ಕೃತಿ, ಜೀವನ ಮೌಲ್ಯಗಳೊಂದಿಗೆ ಜೀವನ ನಡೆಸುವ ಇಲ್ಲಿನ ಯಾವುದೇ ಧರ್ಮ,ಮತ, ಪಂಗಡದ ಪ್ರಜೆಗಳಿಗೆ ನಿರ್ಭೀತಿಯಿಂದ ಬದುಕಲು ಈ ದೇಶದಲ್ಲಿ ಮಾತ್ರ ಸಾಧ್ಯ. ಹಿಂದು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಜಾತ್ಯಾತೀತನಾಗಿದ್ದಾನೆ ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಸಿಎಎ ಮತ್ತು ಎನ್‌ಸಿಆರ್ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಮತ್ತು ಅದನ್ನು ಬೆಂಬಲಿಸುವ ಸಲುವಾಗಿ ಗುರುವಾರ ಆಯೋಜಿಸಿದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಸಿಎಎ, ಎನ್‌ಆರ್‌ಸಿ ಕಾಯ್ದೆ ಭಾರತದ ಮುಸ್ಲಿಂಮರಿಗೆ ಕಿಂಚಿತ್ತೂ ತೊಂದರೆ ನೀಡುವುದಿಲ್ಲ. ಆದರೆ ದೇಶದಲ್ಲಿ ಅಶಾಂತಿ, ಅರಾಜಕತೆ, ಪ್ರಕ್ಷುಬ್ಧ ಪರಿಸ್ಥಿತಿಯನ್ನು ಏರ್ಪಡಿಸುವ ದುರುದ್ದೇಶದಿಂದ ಕಾಂಗ್ರೆಸ್ ಹಾಗೂ ಅದರ ಬೆಂಬಲಿತ ಇತರ ಪಕ್ಷಗಳ ನಾಯಕರು ಇಲ್ಲಿನ ಮುಸ್ಲಿಂರಲ್ಲಿ ತಪ್ಪು ಸಂದೇಶವನ್ನು ಬಿತ್ತಿ ಯುವಕರನ್ನು ಕೆರಳಿಸಿ ದೇಶದೆಲ್ಲೆಡೆ ಕೋಮುಗಲಭೆ, ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಅಸಲಿಗೆ ಇದೇ ಕಾಂಗ್ರೆಸ್ ನಾಯಕರೇ ಈ ಕಾಯ್ದೆಯನ್ನು ರೂಪಿಸಲು ಚಿಂತನೆ ನಡೆಸಿದ್ದರೂ, ಅದನ್ನೆಲ್ಲಾ ಮರೆತವರಂತೆ ವರ್ತಿಸುತ್ತಿದ್ದಾರೆ. ಮಂಗಳೂರನ್ನು ಮತ್ತೊಂದು ಕಾಶ್ಮೀರವನ್ನಾಗಿಸುವ ಅವರ ಷಡ್ಯಂತ್ರ ಪೊಲೀಸರ ಸಂದರ್ಭೋಚಿತ ಕಾರ್ಯಾಚರಣೆಯಿಂದ ತಪ್ಪಿಹೋಗಿದೆ. ಸಂಘಟಿತ ಹಿಂದು ಸಮಾಜಕ್ಕೆ ಶಕ್ತಿ ತುಂಬಲು ಪ್ರತಿಯೊಬ್ಬರೂ ದೇಶಪ್ರೇಮದೊಂದಿಗೆ ಜಾಗೃತರಾಗಬೇಕಾಗಿದೆ ಎಂದರು.
ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ರಾಮಜನ್ಮಭೂಮಿ, ಜಮ್ಮುಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದು, ತ್ರಿವಳಿ ತಲಾಖ್ ನಿಷೇಧದಂತಹ ಐತಿಹಾಸಿಕ ತೀರ್ಪುಗಳನ್ನು ದೇಶದ ಮುಸಲ್ಮಾನ ಬಾಂಧವರು ಸ್ವೀಕರಿಸಿದ್ದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಸಿಎಎ, ಎನ್‌ಆರ್‌ಸಿ ಕಾಯ್ದೆಯನ್ನು ನೆಪವಾಗಿರಿಸಿಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸುವ ಹವಣಿಕೆಯಾಗಿದೆ. ಮುಸಲ್ಮಾನರ ಶ್ರೇಷ್ಠ ಇಮಾಮ್‌ಗಳು ಕಾಯ್ದೆಯ ಪರವಾಗಿ ಹೇಳಿಕೆ ನೀಡಿದರೂ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಸಿದ್ಧರಾಮಯ್ಯ, ಡಿಕೆಶಿ, ದಿನೇಶ್ ಗುಂಡೂರಾವ್‌ನಂತಹವರು ಅವರಿಗಿಂತಲೂ ದೊಡ್ಡ ಇಮಾಮ್‌ಗಳಂತೆ ವರ್ತಿಸುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಕಾಯ್ದೆಗಳು ದೇಶದ ಮುಸ್ಲಿಂರ ವಿರೋಧಿ ಕಾಯ್ದೆ ಎಂದು ಕಾಂಗ್ರೆಸ್‌ನವರು ಸಾಬೀತು ಪಡಿಸುವುದಾದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ ಎಂದು ಸವಾಲು ಹಾಕಿದರು. ಬಿನ್ ಲಾಡೆನ್ ಸಂಸ್ಕೃತಿ ದೇಶದೊಳಕ್ಕೆ ತಂದರೆ ತರುಣರು ಛತ್ರಪತಿ ಶಿವಾಜಿಗಳಾಗಬೇಕಾದೀತು ಎಂದು ಎಚ್ಚರಿಸಿದರು.
ಬಜರಂಗಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆ ಮಾಡುವವರು ಬಿಜೆಪಿ ನೇತೃತ್ವದ ಸರಕಾರ ಒದಗಿಸಿದ ಅಲ್ಪಸಂಖ್ಯಾಕರ ಧನಸಹಾಯವನ್ನು ಹಿಂತಿರುಗಿಸಬೇಕು ಎಂದು ಸವಾಲು ಹಾಕಿದರು.
ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಭಜರಂಗದಳ ವಿಟ್ಲ ಸಂಯೋಜಕ ಅಕ್ಷಯ ರಜಪೂತ ಭಾಗವಹಿಸಿದ್ದರು. ಆನಂದ ಕಲ್ಲಕಟ್ಟ, ಗೋವರ್ಧನ ಕುಮಾರ್ ಇಡ್ಯಾಳ, ಪದ್ಮನಾಭ ಕಟ್ಟೆ, ಅರುಣ್ ಎಂ.ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಲೋಹಿತ್ ಅನ್ನಮೂಲೆ ಪ್ರಾರ್ಥಿಸಿ, ವಿಶ್ವ ಹಿಂದು ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ ಸ್ವಾಗತಿಸಿದರು. ಸಹಸಾಪ್ತಾಹಿಕ ಪ್ರಮುಖ್ ಧನಂಜಯ ಸೆರ್ಕಳ ವಂದಿಸಿದರು. ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here