ಬಂಟ್ವಾಳ: ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ವಿವಿಧ ಬ್ಯಾಂಕ್ ನಿಂದ ಕಳೆದ ಮೂರು ತಿಂಗಳಿನಿಂದ ಕೋಟ್ಯಾಂತರ ರೂ ಹಣಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ನೇತ್ರತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ಪಂಪ್ ವೆಲ್ ನ,ಶೆಟ್ಟಿ ಅಪಾರ್ಟ್ ಮೆಂಟ್ ನಿವಾಸಿ ಹಮೀದ್ ಅವರ ಪುತ್ರ
ಬಶೀರ್ ಯಾನೆ ಹಸನ್ ಬಶೀರ್, (42) ಬಂಧಿತ ಆರೋಪಿ.
ಮಂಗಳೂರಿನಲ್ಲಿ ಬಂಧಿಸಿದ ಈ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ‌ ನ.5 ರಂದು ಈತನ ಮೇಲೆ ಕೋಅಪರೇಟಿವ್ ಸೊಸೈಟಿ ಗೆ ವಂಚನೆ ಮಾಡಿದ್ದಾನೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ವಿವರ:
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಇರುವ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಲ್ಲಿ “CARVAN AUTOMOBILES” ಎಂಬ ಕಾರು ಮಾರಾಟ ಸಂಸ್ಥೆಯ ಹೆಸರಲ್ಲಿ 7 ಲಕ್ಷ ವಾಹನ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಬ್ಯಾಂಕ್ ವತಿಯಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ತನಿಖೆ ಮುಂದುವರಿಸುತ್ತಾರೆ. ಈ ಪ್ರಕರಣದ ಆರೋಪಿ ಬಶೀರ್ ಯಾನೆ ಹಸನ್ ಬಶೀರ್, ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಶೀರನು ತನ್ನ ಹೆಸರಿನಲ್ಲಿ “CARVAN AUTOMOBILES” ವಿವಿಧ ಕಂಪೆನಿಯ ಕಾರು ಮಾರಾಟಗಾರರು ಎಂದು ತನ್ನ ಹೆಸರಿನಲ್ಲಿ ಒಂದು ವಾಹನ ಮಾರಾಟ ನಕಲಿ ಸಂಸ್ಥೆ ಮಾಡಿಕೊಂಡಿದ್ದು, ಅದರ ಹೆಸರಿನಲ್ಲಿ ತಾನು ಸ್ವತಃ ಸುಮಂಗಲ ಕೋ. ಆಪರೇಟಿವ್ ಸೊಸೈಟಿಯಲ್ಲಿ ನಕಲಿ ದಾಖಲಾತಿ ನೀಡಿ ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಅಲ್ಲದೇ ಬಶೀರ್ “CARVAN AUTOMOBILES” ಎಂಬ ಅಸ್ತಿತ್ವದಲ್ಲಿರುವ ಕಾರು ಮಾರಾಟ ಸಂಸ್ಥೆಯ ಹೆಸರಿನಲ್ಲಿ ಮಂಗಳೂರು, ಬಂಟ್ವಾಳ, ವಿಟ್ಲ, ಮೂಡಬಿದ್ರೆ ವಿವಿಧ ಬ್ಯಾಂಕ್ ಗಳಿಂದ ಬೇರೆಯವರ ಹೆಸರಿನಲ್ಲಿ ಕೊಟೇಶನ್ ನೀಡಿ ಸುಮಾರು 2 ಕೋಟಿ ರೂಪಾಯಿ ಅಧಿಕ ಹಣ ಪಡೆದಿರುವ ಬಗ್ಗೆ ಆತನು ವಿವಿಧ ಬ್ಯಾಂಕ್ ಗಳಲ್ಲಿ ಹೊಂದಿರುವ ಕರೆಂಟ್ ಅಕೌಂಟ್ ನಿಂದ ಮಾಹಿತಿ ತಿಳಿದು ಬಂದಿದೆ ಈ ಬಗ್ಗೆ ತನಿಖೆ ಮುಂದುವರಿದಿದ್ದು ಇದರ ಹಿಂದಿರುವ ಸತ್ಯಾಂಶವನ್ನು ಬಯಲಿಗೆ ತರಲಿದ್ದಾರೆ.
ಪ್ರಕರಣದ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದ್ದು, ಇನ್ನಷ್ಟು ಆರೋಪಿಗಳು ಪೊಲೀಸರ ತನಿಖೆಯ ಬಳಿಕ ಸಿಕ್ಕಿಬೀಳುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ. ಬಶೀರ್ ಈ ಪ್ರಕರಣ ಅಲ್ಲದೆ ಇನ್ನೂ ಹಲವು ಪ್ರಕರಣಗಳಲ್ಲಿ ಬ್ಯಾಂಕ್ ಸಾಲ ಮಾಡಿಕೊಡುವ ಬಗ್ಗೆ ಭರವಸೆ ನೀಡಿ ಹಣ ವಂಚನೆ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಈ ಬಗ್ಗೆಯೂ ತನಿಖೆ ಮುಂದುವರಿದಿದೆ.
ಬ್ಯಾಂಕ್ ಶಾಮೀಲು: ನಿಯತ್ತಾಗಿ ಎಲ್ಲಾ ದಾಖಲೆ ನೀಡಿಯೂ ಸಾಲ ನೀಡದ ಈ ಬ್ಯಾಂಕ್ ಗಳು ನಕಲಿ ದಾಖಲೆಗಳನ್ನು ನೀಡುವ ವ್ಯಕ್ತಿಗಳಿಗೆ ಸಾಲ ನೀಡುತ್ತವೆ ಎಂಬುದು ಇಂತಹ ಪ್ರಕರಣಗಳಿಂದ ಸಾಬೀತು ಅಗುತ್ತಿದೆ. ಜನಸಾಮಾನ್ಯರು ಸಾಲ ಪಡೆಯಲು ಕ್ಯೂ ನಿಂತರೂ ಕೊಡಲ್ಲ, ಸರಿಯಾದ ದಾಖಲೆ ನೀಡಿದರೂ ಸತಾಯಿಸುತ್ತವೆ ಆದರೆ ನಕಲಿ ದಾಖಲೆ ನೀಡುವವರಿಗೆ ಸ್ಥಳ ಪರಿಶೀಲನೆ ನಡೆಸದೆಯೂ ಸಾಲ ನೀಡುತ್ತದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದಾರೆ. ಕೇವಲ ಮೂರು ತಿಂಗಳಲ್ಲಿ ಕೋಟ್ಯಾಂತರ ರೂ ಅವ್ಯವಹಾರ ನಡೆಯಲು ಇದರ ಹಿಂದೆ ಬ್ಯಾಂಕ್ ನ ಕೈವಾಡ ಕೂಡ ಇರಬಹುದು ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here