ಬಂಟ್ವಾಳ : ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರ ಮುನಿಸಿಕೊಳ್ಳದೇ ದ್ವೇಷದ ಬೆಂಕಿಯನ್ನು ನಂದಿಸಿ ಪ್ರೀತಿಯ ದೀಪವನ್ನು ಬೆಳಗುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ನುಡಿದರು.
ಅವರು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನ ಆಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಮಾಣಿಯ ಗಾಂಧಿ ಮೈದಾನದಲ್ಲಿ ಬುಧವಾರ ಸಂಜೆ ಆಯೋಜಿಸಲಾದ “ಸೌಹಾರ್ದ ಕ್ರಿಸ್ಮಸ್ -2019” ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಎಲ್ಲ ಧಾರ್ಮಿಕ ನೇತಾರರು ಮನುಕುಲದ ಉದ್ಧಾರಕ್ಕೆ ಬಂದವರು. ಆದರೆ ನಾವು ನನ್ನ ಧರ್ಮವೇ ಮೇಲು ಎಂಬ ಅಹಂಕಾರದಿಂದ ಮನುಕುಲದ ಶಾಂತಿಯನ್ನು ಮರೆಯುತ್ತಿದ್ದೇವೆ. ನಮ್ಮಲ್ಲಿ ಪ್ರೀತಿ ವಿಶ್ವಾಸ ಇರುವುದು ಮುಖ್ಯ ಎಂದ ಅವರು,ಪಂಗಡಗಳು ಬೇರೆ ಬೇರೆಯಾಗಿದ್ದರೂ, ದಾರಿ ಒಂದೇ ಎಂದರು. ಧರ್ಮಾನುಷ್ಠಾನ ಮಾಡುವವರು ಪ್ರೀತಿ ಹಂಚುವ ಕಾರ್ಯ ನಡೆಸುತ್ತಾರೆ ಎಂದ ಅವರು, ಸೌಹಾರ್ದತೆ ವೇದಿಕೆಗಷ್ಟೇ ಸೀಮಿತ ಆಗದೆ ನಿಜಾರ್ಥದಲ್ಲಿ ಅನುಷ್ಠಾನ ಗೊಳ್ಳಲಿ, ಶಾಂತಿ ಪ್ರಿಯ ಪವಿತ್ರ ಮಣ್ಣಿನಲ್ಲಿ ಅಶಾಂತಿ ಸೃಷ್ಟಿಸದೇ ಪರಸ್ಪರ ಪ್ರೀತಿ ಹಂಚುವ ಮೂಲಕ ವಿಶ್ವಮಾನವರಾಗಬೇಕು ಎಂದರು.
ಪಕ್ಷಿಕೆರೆ ಸೈಂಟ್ ಜ್ಯೂಡ್ ಥಾಡೆಯಸ್ ಚರ್ಚ್ ನ ಧರ್ಮಗುರು ರೆ.ಫಾ.ಮೆಲ್ವಿನ್ ನೊರೋನ್ಹಾ ಹಿತವಚನ ನೀಡಿ, ಪರಸ್ಪರ ಪ್ರೀತಿಸುವುದು ಕ್ರೈಸ್ತ ತತ್ವದ ಮೂಲ ಆಶಯ, ನಾವು ಮಾನವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಏಸುಸ್ವಾಮಿಯ ಅನುಯಾಯಿಗಳು ಪ್ರಾರಂಭಿಸಿದ ಪರರ ಏಳಿಗೆಗೋಸ್ಕರ ಕೆಲಸಗಳು ಗಮನಾರ್ಹ ಎಂದ ಅವರು, ಪರಸ್ಪರ ಪ್ರೀತಿಯೇ ಮನುಕುಲದ ಬೆಳಕು. ಜಾತಿ, ಮತ ಬೇಧ ಮರೆತು ನಾವು ಮಾನವರಾಗೋಣ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದರು.
ಮಂಗಳೂರು ಚೊಕ್ಕಬೆಟ್ಟುವಿನ ಮೌಲಾನಾ ಯು.ಕೆ.ಅಬ್ದುಲ್ ಅಜೀಜ್ ದಾರಿಮಿ ಸಂದೇಶ ನೀಡಿ, ಜಗತ್ತು ಎಂಬ ವಿಶ್ವವಿದ್ಯಾಲಯದಲ್ಲಿ ಪ್ರಕೃತಿಯೇ ದೊಡ್ಡ ಗುರುವಾಗಿದ್ದು, ಮನುಜರೆಲ್ಲರೂ ವಿದ್ಯಾರ್ಥಿಗಳು ಎಂದು ತಿಳಿದುಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ತನ್ನದು ಎಂಬ ಅಹಂಕಾರ ಇದ್ದರೆ ನಮ್ಮ ಏಳಿಗೆ ಸಾಧ್ಯವಿಲ್ಲ. ಪ್ರೀತಿ ವಿಶ್ವಾಸವೇ ನಿಜವಾದ ಬದುಕು. ಹೃದಯದೊಳಗೆ ಬೆಳಕು ಇದ್ದರೆ ಯಾವುದೇ ಗ್ರಹಣಕ್ಕೆ ಹೆದರಬೇಕಾಗಿಲ್ಲ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರವಾಗಿದ್ದು ಮದರ್ ಥೆರೆಸಾ ರಂತಹ ಆದರ್ಶಮಯಿಗಳು ನಮಗೆ ದಾರಿದೀಪವಾಗಬೇಕು. ಪ್ರೀತಿ ಸ್ನೇಹ ಮನೋಭಾವ ಇದ್ದಾಗ ಮಾತ್ರ ದೇವರು ಒಲಿಯುತ್ತಾನೆ ಎಂದರು.
ಸೂರಿಕುಮೇರು ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಪಂ ಸದಸ್ಯೆ ಮಂಜುಳಾ ಮಾಧವಮಾವೆ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ , ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಸಿಕ್ವೇರಾ, ಸಿಸ್ಟರ್ ನ್ಯಾನ್ಸಿ ವೇದಿಕೆಯಲ್ಲಿದ್ದರು. ಸೂರಿಕುಮೇರು ಚರ್ಚ್‌ಗೆ ಜನರೇಟರ್ ಕೊಡುಗೆ ನೀಡಿದ, ದಿನದ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಅಬುಧಾಬಿಯ ಉದ್ಯಮಿ ಬೆನೆಡಿಕ್ಟ್ ಪಿಂಟೋ ರವರ ಪರವಾಗಿ ಅವರ ಸಹೋದರ ಎವರೆಸ್ಟ್ ಪಿಂಟೋ ರವರನ್ನು ಗೌರವಿಸಲಾಯಿತು. ಚಾಪರ್ಕ ನಾಟಕ ತಂಡದ ಮುಖ್ಯಸ್ಥ ದೇವದಾಸ್ ಕಾಪಿಕಾಡ್ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಡಲ್ ಉರಿಸಿ, ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಿಸಲಾಯಿತು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಸ್ವಾಗತಿಸಿ, ಪ್ರಸ್ತಾವಿಸಿದರು. ಫಾ.ಗ್ರೆಗರಿ ಪಿರೇರಾ ವಂದಿಸಿದರು. ಬಿ.ರಾಮಚಂದ್ರ ರಾವ್ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಮಾಣಿ ಜಂಕ್ಷನ್ ನಿಂದ ಗಾಂಧಿ ಮೈದಾನದವೆರೆಗೆ ಸೌಹಾರ್ದ ಮೆರವಣಿಗೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here