ವಿಟ್ಲ: ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. 31 ರಂದು ಜರಗಲಿರುವ ಬಂಟ್ವಾಳ ತಾಲೂಕು ಮಟ್ಟದ 15 ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಾವಿರಕ್ಕೂ ಹೆಚ್ಚು ಸಾಹಿತ್ಯ ಪ್ರೇಮಿಗಳು ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮಕ್ಕಳ ಲೋಕ ಬಂಟ್ವಾಳ ಇದರ ಅಧ್ಯಕ್ಷ ಕೆ. ವಿಠಲ ಶೆಟ್ಟಿ ವಿಟ್ಲ ಅವರು ವಿಟ್ಲದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸುಬ್ರಾಯ ಪೈ ವಿಟ್ಲ ಇವರ ಗೌರವಾಧ್ಯಕ್ಷತೆ ಮತ್ತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ ಇವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ವಿವಿಧ ಉಪಸಮಿತಿಗಳನ್ನು ಮಾಡಲಾಗಿದೆ. ಕಿರುನಾಟಕ, ಕವಿಗೋಷ್ಠಿ, ಚಿತ್ತ ಚಿತ್ತಾರ ಮತ್ತು ಕಥಾ ಬರವಣಿಗೆ ಕಾರ್ಯಕ್ರಮಗಳು ನಡೆಯಲಿದ್ದು ಇವು ವಿದ್ಯಾರ್ಥಿಗಳನ್ನು ಸಾಹಿತ್ಯರಚನೆಗೆ ಪ್ರೇರೇಪಿಸುವ ಸದಾಶಯವನ್ನು ಹೊಂದಿವೆ. ಎಂದು ಶೆಟ್ಟಿ ತಿಳಿಸಿದರು. ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಶಾಲೆಯವರು ಸಮ್ಮೇಳನಕ್ಕೆ ಒಂದು ದಿನ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ತಾಲೂಕಿನ ಶಾಲೆಗಳ ಸದ್ರಿ ಅಥವಾ ಹಿಂದಿನ ವರ್ಷದ ವಾರ್ಷಿಕ ಮುದ್ರಿತ ಯಾ ಹಸ್ತಪ್ರತಿಯಲ್ಲಿರುವ ಸಂಚಿಕೆಗಳನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲು ಅವಕಾಶವಿದ್ದು ಭಾಗವಹಿಸಿದ ಶಾಲೆಗೆ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಗುವುದು. ಗ್ರಾಮಾಂತರದಲ್ಲಿ ಜರಗುವ ಕಾರ್ಯಕ್ರಮದ ನೆನಪಿನ ಬುತ್ತಿಯಾಗಿ ವಿಟ್ಲಶ್ರೀ ಎಂಬ ಸ್ಮರಣ ಸಂಚಿಕೆನ್ನು ರಮೇಶ ಎಂ ಬಾಯಾರುರವರ ಸಂಪಾದಕತ್ವದಲ್ಲಿ ಹೊರತರಲಾಗುತ್ತದೆ.
ಕಾರ್ಯಕ್ರಮಗಳ ನಿರೂಪಣೆ, ಸ್ವಾಗತ, ಧನ್ಯವಾದ, ಅಧ್ಯಕ್ಷತೆ ಮಕ್ಕಳಿಗೇ ಮೀಸಲಾಗಿದ್ದು ಮುಖ್ಯ ಅತಿಥಿಗಳು ಉದ್ಘಾಟಕರು ಎಲ್ಲರೂ ಮಕ್ಕಳೇ ಆಗಿರುವುದು ಮಕ್ಕಳ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯ. ಬೆಳಗ್ಗೆ ಭವ್ಯ ಮೆರವಣಿಗೆ ನಡೆಯಲಿದೆ. ವಿಟ್ಲ ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಕನ್ನಡ ಧ್ವಜವನ್ನು, ಕ.ಸಾ.ಪ. ಬಂಟ್ವಾಳ ಇದರ ಅಧ್ಯಕ್ಷ ಕೆ. ಮೋಹನ್ ರಾವ್ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಅಧ್ಯಕ್ಷತೆಯನ್ನು ಆತಿಥೇಯ ಸಂಸ್ಥೆಯ ಕುಮಾರಿ ಧನ್ಯಶ್ರೀ ಬಿ. ವಹಿಸಲಿದ್ದು ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪೆರುವಾಯಿ ಶಾಲಾ ವಿದ್ಯಾರ್ಥಿನಿ ಕುಮಾರಿ ವೀಕ್ಷಿತಾ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬೇಕೂರಿನ ಸರಕಾರಿ ಸೆಕೆಂಡರಿ ಶಾಲೆಯ ಕುಮಾರಿ ಕಾವ್ಯ ಭಾಗವಹಿಸಲಿದ್ದು ಪುತ್ತೂರು ಸುದಾನ ವಸತಿ ಶಾಲೆಯ ಸಹಶಿಕ್ಷಕಿ ಮತ್ತು ಅಂಕಣಕಾರಾದ ಕವಿತಾ ಅಡೂರು ಸ್ಮರಣ ಸಂಚಿಕೆ ಮತ್ತು ಮಕ್ಕಳಿಂದ ರಚಿತ ಪುಸ್ತಕಗಳನ್ನು ಬಿಡುಗಡೆ ಮಾಡುವರು.
ಸಾಹಿತ್ಯ ಚಟುಟಿಕೆಗಳನ್ನು ಉತ್ತಮವಾಗಿ ನಡೆಸುವ ತಾಲೂಕಿನ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ’ಸಾಹಿತ್ಯ ತಾರೆ’ ಪ್ರಶಸ್ತಿಯನ್ನು ನೀಡಲಾಗುತ್ತದೆ. ಶಾಲೆಯಲ್ಲಿ ಮಕ್ಕಳ ಯೋಗ ಮತ್ತು ಮೌಲ್ಯಶಿಕ್ಷಣ ಚಟುವಟಿಕೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಅಳಿಕೆಯ ಆನಂದ ಶೆಟ್ಟಿಯವರಿಗೆ ಬಾಲಬಂಧು ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗುವುದು.
ಮಕ್ಕಳ ಸಾಹಿತ್ಯ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿ ನಾಡ ನುಡಿಯ ಉಳಿವಿಗೆ ಅವರನ್ನು ಸಿದ್ಧಗೊಳಿಸಬೇಕು. ಅವರಲ್ಲಿರುವ ಭಾಷೆ ಮತ್ತು ಸಾಹಿತ್ಯದ ಒಲವುಗಳನ್ನು ಬೆಂಬಲಿಸಿ ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿ ಬೆಳೆಯುವ ಪ್ರೇರಣೆ ನೀಡುವಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಸಫಲವಾಗುತ್ತಿವೆ ಎಂಬುದನ್ನು ಹಿಂದಿನ ಹದಿನಾಲ್ಕು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಸಮರ್ಥಿಸಿವೆ. ಕೃಷಿಕರಲ್ಲದೆ ಸಾಹಿತ್ಯಾಸಕ್ತರು, ಧಾರ್ಮಿಕ ಕೇಂದ್ರಗಳು, ರಾಜಕೀಯ ನಾಯಕರು, ಸರಕಾರಿ ನೌಕರರು ವಿಶೇಷವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ನಾನಾ ಸಂಘ ಸಂಸ್ಥೆಗಳು ಸ್ವಯಂ ಮುಂದೆ ಬಂದು ಸಮ್ಮೇಳನದ ಯಶಸ್ಸಿನ ಪಾಲುದಾರರಾಗುವಂತೆ ಕೆ. ವಿಠಲ ಶೆಟ್ಟಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಲೋಕ ಬಂಟ್ವಾಳ ತಾಲೂಕು ಇದರ ಕೋಶಾಧಿಕಾರಿ ರಮೇಶ ಎಂ ಬಾಯಾರು, ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here