ವಿಟ್ಲ: ದೇಶದ ಸಾರ್ವಭೌಮತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರಿಗಿದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಹೊಣೆ ಸಂತರಿಗಿದೆ. ಜಾತಿ ಧರ್ಮಗಳನ್ನು ಮೀರಿ ಸಂತರು ಇರಬೇಕೆಂಬುದನ್ನು ತೋರಿಸಿದವರು ಪೇಜಾವರಶ್ರೀಗಳು. ಸಮಾಜಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿಕೊಂಡ ಪೇಜಾವರ ಶ್ರೀಗಳು ನಮ್ಮ ನಡುವೆ ಆರೋಗ್ಯದಿಂದ ಇನ್ನಷ್ಟು ಕಾಲ ಇರಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಪೇಜಾವರ ಶ್ರೀ ವಿಶ್ವೇತೀರ್ಥ ಸ್ವಾಮೀಜಿಯವರ ಆರೋಗ್ಯ ವರ್ಧನೆಯ ನಿಟ್ಟಿನಲ್ಲಿ ನಡೆಸಿದ ಧನ್ವಂತರೀ ಯಾಗದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಅವರ ಪ್ರತಿಯೊಂದು ಕಾರ್ಯಗಳು ಸಂತ ಸಮಾಜಕ್ಕೆ ಹಾಗೂ ಜನಮಾನಸಕ್ಕೆ ಅನುಕರಣಿಯವಾಗಿದೆ ಎಂದರು.
ದೇಶದ ಪ್ರತಿಯೊಂದು ಕ್ಷೇತ್ರವೂ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ಸರಿಪಡಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರಕೃತಿ ನಾಶದಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ಮನುಷ್ಯನ ಕೋಪವೂ ತಾರಕಕ್ಕೇರುತ್ತಿದೆ. ಪ್ರಾಕೃತಿಕ ಹಾನಿಗಳು ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಸಾರ್ವಜನಿಕ ಸೊತ್ತುಗಳನ್ನು ಹಾಳು ಮಾಡುವ ಕಾರ್ಯ ಸರಿಯಲ್ಲ. ಸೌಹಾರ್ದಯುತವಾಗಿ ಮುಗಿಸುವ ವಿಚಾರವನ್ನು ಹಿಂಸೆಯಿಂದ ಗೆಲ್ಲಲು ಸಾಧ್ಯವಿಲ್ಲ. ಧರ್ಮ, ಮತ, ಪಂಥ, ಪಂಗಡಗಳನ್ನೆಲ್ಲಾ ಮೀರಿ ಅನ್ಯೋನ್ಯತೆಯಿಂದ ಬಾಳಬೇಕಾಗಿದೆ ಎಂದು ತಿಳಿಸಿದರು.
ವೇ. ಮೂ. ನಯನಕೃಷ್ಣ ಜಾಲ್ಸೂರು ಅವರ ನೇತೃತ್ವದಲ್ಲಿ ಧನ್ವಂತರೀ ಯಾಗ, ಲೋಕಕಲ್ಯಾಣಕ್ಕಾಗಿ ಚಂಡಿಕಾಯಾಗ ನಡೆಸಿದರು.
ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ, ಕ್ಷೇತ್ರದ ಕಾರ್ಯನಿರ್ವಾಹಕ ವಿಠಲ ಶೆಟ್ಟಿ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. ರಾತ್ರಿ ಶ್ರೀಕ್ಷೇತ್ರದಲ್ಲಿ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here