ಬಂಟ್ವಾಳ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯವಾದದ್ದು. ಈ ನಿಟ್ಟಿನಲ್ಲಿ ಮಜಿ ಸರಕಾರಿ ಶಾಲೆಯೊಂದಿಗೆ ಕೈಜೋಡಿಸಿದ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಸೇವಾಮನೋಭಾವ ಮೆಚ್ಚುವಂತದ್ದು ಎಂದು ಲಯನ್ಸ್ ಜಿಲ್ಲಾ 317 -ಡಿ, ಇದರ ಉಪ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಅವರು ವೀರಕಂಬ ಮಜಿ ಇಲ್ಲಿನ ಸ.ಹಿ.ಪ್ರಾ. ಶಾಲೆಯಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಪ್ರಾರಂಭವಾದ ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ ಬಾಲ್ಯದಲ್ಲಿ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವ್ಯವಸ್ಥೆ ಮಾಡಿದರೆ ಯಾವ ಸರಕಾರಿ ಶಾಲೆಗಳು ಮುಚ್ಚಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಮಜಿ ಶಾಲೆಯ ಪರಿಸರವನ್ನು ಕಂಡಾಗಲೇ ಇಲ್ಲಿಯ ಶಿಕ್ಷಣದ ಗುಣಮಟ್ಟ ನಾವು ತಿಳಿಯಬಹುದು. ಮಜಿ ಶಾಲೆಯ ದತ್ತು ಸಂಸ್ಥೆ ಹಾಗೂ ಶಾಲಾಭಿವೃದ್ಧಿ ಸಮಿತಿಯ ಯೋಜನೆಯಂತೆ ಶತಮಾನ ಹೊಸ್ತಿಲಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೂರು ಕಾರ್ಯಕ್ರಮಗಳು ಶಾಲೆಯಲ್ಲಿ ನಡೆಯಲಿರುವುದರಿಂದ ಈ ಎಲ್ಲಾ ಕಾರ್ಯಗಳಿಗೆ ಲಯನ್ಸ್ ಕ್ಲಬ್ ಬಂಟ್ವಾಳ ಕೈಜೋಡಿಸುತ್ತದೆ ಎಂದರು.
ಬಂಟ್ವಾಳ ಜೀವವಿಮಾ ನಿಗಮದ ಅಸಿಸ್ಟೆಂಟ್ ಮೆನೇಜರ್ ಎಸ್. ಎಲ್. ಶ್ರೀಪಾದ ಮಾತನಾಡಿ, ವಿಧ್ಯಾರ್ಥಿಯಾಗಿದ್ದಾಗ ತಾನು ಕಲಿತು ಬೆಳೆಸಿದ ಗುಣಗಳಿಂದ ಆತ್ಮವಿಶ್ವಾಸದ ಮೂಲಕ ಅವಕಾಶಗಳನ್ನು ಪಡೆದು ಯಶಸ್ಸು ಪಡೆಯಲು ಸಾಧ್ಯ ಎಂದರು.
ಬಂಟ್ವಾಳ ನಿರ್ಮಲ ಹೃದಯ ಫಿಸಿತೆರಪಿ ಸೆಂಟರ್ ನ ಸಂಚಾಲಕ ದಾಮೋದರ ಬಿ. ಎಂ. ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಹಕಾರ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶತಮಾನದ ಹೆಜ್ಜೆಯಲ್ಲಿರುವ ಮಜಿ ಶಾಲೆಯ ಶತಮಾನೋತ್ಸವ ಊರ ಹಬ್ಬವಾಗಿ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಲಯನ್ಸ್ ಉಪಾಧ್ಯಕ್ಷ ಕೃಷ್ಣ ಶ್ಯಾಮ್, ಸದಸ್ಯರಾದ ರಮೇಶ್ ಕುಲಾಲ್, ರಾಘವೇಂದ್ರ ಕಾರಂತ್, ಪ್ರಮೀಳಾ ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ವೀರಕಂಬ, ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಭಾಗವಹಿಸಿದ್ದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಸ್ಮಾರ್ಟ್ ತರಗತಿಯ ಉದ್ದೇಶದ ಬಗ್ಗೆ ಪ್ರಸ್ತಾವಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here