

ಬಂಟ್ವಾಳ: ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಒಂದು ಬಾರಿ ಅಭಿವೃದ್ದಿ ಯೋಜನೆಯಲ್ಲಿ ಬಂಟ್ವಾಳ ತಾಲೂಕಿನ ರಾಯಿ, ಪಂಜಿಕಲ್ಲು, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ಅಣ್ಣಳಿಕೆ-ಕರಿಮಲೆ ರಸ್ತೆಗೆ 2 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪಂಜಿಕಲ್ಲು ಪದವುನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಒಂದು ಭಾರಿ ಅಭಿವೃದ್ದಿ ಯೋಜನೆಯಲ್ಲಿ ಅಣ್ಣಳಿಕೆ-ಕರಿಮಲೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೂರು ಗ್ರಾಮ ಪಂಚಾಯತ್ಗಳನ್ನು ಬೆಸೆಯುವ ಈ ರಸ್ತೆ ಕಾಮಗಾರಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರವಾಗಿ ನಡೆಸಲು ಸೂಚಿಸಲಾಗಿದೆ ಎಂದರು.
ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ಷಣ್ಮುಗಂ ಅವರು ಮಾತನಾಡಿ, 1.8೦ ಕಿ.ಮೀ. ದೂರದವರೆಗೆ ಏಕ ಪಥ ರಸ್ತೆಯನ್ನು ಮಧ್ಯಮ ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೊಗೆರೋಡಿ ಕನ್ಸ್ಟ್ರಕ್ಷನ್ ಅವರಿಗೆ ಗುತ್ತಿಗೆ ವಹಿಸಲಾಗಿದ್ದು, ಮುಂದಿನ ಫೆಬ್ರವರಿ ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಾ, ತಾ.ಪಂ. ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ಸಂಜೀವ ಪೂಜಾರಿ ಪಿಲಿಂಗಾಲು, ಕರುಣೇಂದ್ರ ಕೊಂಬರಬಲು, ದಿನೇಶ್ ಶೆಟ್ಟಿ ದಂಬೆದಾರ್, ಲಕ್ಷ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ರಮಾನಾಥ ರಾಯಿ, ಕೆ.ಎನ್.ಶೇಖರ್, ಸಂತೋಷ್ ರಾಯಿಬೆಟ್ಟು, ಪೂವಪ್ಪ ಮೆಂಡನ್, ಯಶೋಧರ ಶೆಟ್ಟಿ ದಂಡೆ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವೀಂದ್ರನಾಥ ಶೆಟ್ಟಿ, ಗುತ್ತಿಗೆ ಮೇಲ್ವಿಚಾರಕ ದಾಮೋದರ್ ಮತ್ತಿತರರಿದ್ದರು.








